7 ತಿಂಗಳಿಂದ ಸ್ಥಗಿತಗೊಂಡ ಪಿಂಚಣಿ ಕೂಡಲೇ ಪುನರಾರಂಭಿಸಿ

ಬಾಕಿ ಮೊತ್ತ ಬಿಡುಗಡೆಗೆ ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ ಆಗ್ರಹ

ಸಪ್ತಸಾಗರ ವಾರ್ತೆ,ವಿಜಯಪುರ, ಅ.1: ಕಳೆದ ಸುಮಾರು ಏಳು ತಿಂಗಳಿಂದ ಸ್ಥಗಿತಗೊಂಡಿರುವ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳನ್ನು ಕೂಡಲೇ ಪುನರಾರಂಭಿಸಿ, ಅರ್ಹ ಫಲಾನುಭವಿಗಳಿಗೆ ಬಾಕಿ ಇರುವ ಪಿಂಚಣಿ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ (ರಿ.) ಬೆಂಗಳೂರು–ವಿಜಯಪುರ ಜಿಲ್ಲಾ ಘಟಕ ಆಗ್ರಹಿಸಿದೆ.
ಈ ಕುರಿತು ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದರು.
ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ, ಸಂಧ್ಯಾ ಸುರಕ್ಷಾ, ವಿಧವಾ ಪಿಂಚಣಿ, ಮನಸ್ವಿನಿ, ಮೈತ್ರಿ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪಿಂಚಣಿ ಹಲವು ತಿಂಗಳಿಂದ ಸ್ಥಗಿತಗೊಂಡಿರುವುದರಿಂದ ವಯೋವೃದ್ಧರು, ವಿಧವೆಯರು, ವಿಶೇಷಚೇತನರು ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದ ಫಲಾನುಭವಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪಿಂಚಣಿಯನ್ನೇ ಜೀವನ ನಿರ್ವಹಣೆಯ ಪ್ರಮುಖ ಆಧಾರವಾಗಿಸಿಕೊಂಡಿರುವ ಫಲಾನುಭವಿಗಳಿಗೆ ತಕ್ಷಣ ನೆರವು ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ಅರ್ಹ ಫಲಾನುಭವಿಗಳಿಗೆ ಬಾಕಿ ಪಿಂಚಣಿ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡಬೇಕು. ಪಿಂಚಣಿ ಸ್ಥಗಿತಕ್ಕೆ ಕಾರಣವೇನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಬಾಕಿ ಇರುವ ಅರ್ಜಿಗಳು ಹಾಗೂ ದಾಖಲೆಗಳ ಪರಿಶೀಲನೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ಪಿಂಚಣಿ ನಿಯಮಿತವಾಗಿ ಜಮೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ಅಪ್ಪುರಾಜ್ ನಿಮಾದಾರ, ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಪರಶುರಾಮ ಕಬಾಡೆ, ರಾಜ್ಯ ಉಪಾಧ್ಯಕ್ಷ ವಿಜಯಕುಮಾರ ನಿಮಾದಾರ, ವಿಜಯಪುರ ಜಿಲ್ಲಾ ಅಧ್ಯಕ್ಷ ನಾಗರಾಜ ಪರಶುರಾಮ ಕಬಾಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಾಸೆ, ರಾಜ್ಯ ಅಂಗವಿಕಲರ ಘಟಕದ ಅಧ್ಯಕ್ಷ ಅರುಣ್ ಕುಮಾರ್ ಗುಜ್ಜರ್, ಜಿಲ್ಲಾ ಅಂಗವಿಕಲರ ಘಟಕದ ಅಧ್ಯಕ್ಷ ರಾಘವೇಂದ್ರ ಹೊನ್ನಕಾಂಬಳೆ, ರಾಜ್ಯ ಮಹಿಳಾ ಅಧ್ಯಕ್ಷೆ ನೀಲಾಂಬಿಕಾ ಕಟ್ಟಿಮನಿ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Share this