ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಗುಂಪು ಆಟಗಳ ಕ್ರೀಡಾಕೂಟ ಯಶಸ್ವಿ

ಸಪ್ತಸಾಗರ ವಾರ್ತೆ,ವಿಜಯಪುರ, ಅ. 1:
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ವಿದ್ಯಾವರ್ಧಕ ಸಂಘದ ವಿ.ಭ. ದರಬಾರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ 2026-27ನೇ ಸಾಲಿನ ವಿಜಯಪುರ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಗುಂಪು ಆಟಗಳ ಕ್ರೀಡಾಕೂಟ ಇತ್ತೀಚೆಗೆ ನಗರದಲ್ಲಿ ಯಶಸ್ವಿಯಾಗಿ ನಡೆಯಿತು.
ಕಬಡ್ಡಿ, ಖೋ-ಖೋ, ಹ್ಯಾಂಡ್‌ಬಾಲ್‌, ಟೇಬಲ್‌ ಟೆನಿಸ್‌, ಟೆನಿಸ್‌, ವ್ಹಾಲಿಬಾಲ್‌, ನೆಟ್‌ಬಾಲ್‌ ಹಾಗೂ ಕುಸ್ತಿ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ಕ್ರೀಡಾಕೂಟದಲ್ಲಿ ನಡೆದವು. ಜಿಲ್ಲೆಯ ವಿವಿಧ ಪದವಿ ಪೂರ್ವ ಕಾಲೇಜುಗಳ ಕ್ರೀಡಾಪಟುಗಳು ಉತ್ಸಾಹದಿಂದ ಪಾಲ್ಗೊಂಡರು.
ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಹಾಗೂ ಖಜಾಂಚಿ, ನ್ಯಾಯವಾದಿ ಪ್ರಕಾಶ ಎಸ್‌. ಉಡುಪಿಕರ ಅವರು ಸಸಿಗೆ ನೀರುಣಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳ ದೈಹಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಕ್ರೀಡೆ ಮಹತ್ವದ ಸಾಧನವಾಗಿದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿದ್ದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ವಿಜಯಪುರದ ಉಪನಿರ್ದೇಶಕ ಕೆ.ಎ. ಉಪ್ಪಾರ ಅವರು ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಜಿಲ್ಲೆಯ ಕೀರ್ತಿಯನ್ನು ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಸಲಹೆ ನೀಡಿದರು.
ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಕೆ.ಜಿ. ದೇಶಪಾಂಡೆ, ಡಾ. ಆರ್.ಜಿ. ಮಂಗಲಗಿ, ಅಧ್ಯಕ್ಷ ರಾಜೇಶ ದರಬಾರ ಹಾಗೂ ಮಾಜಿ ಶಾಸಕ, ಜಂಟಿ ಕಾರ್ಯದರ್ಶಿ ಸೋಮನಗೌಡ ಪಾಟೀಲ (ಸಾಸನೂರ) ಅವರು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಜಿಲ್ಲಾ ಕ್ರೀಡಾ ಸಂಘಟಕ ಹಾಗೂ ಶಾಖಾಧಿಕಾರಿ ಬಿ.ಟಿ. ಗೊಂಗಡಿ ಅವರು ಮಾತನಾಡಿ, ವಿ.ಭ. ದರಬಾರ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಚಾರ್ಯರು ಕಳೆದ ಮೂರು ದಶಕಗಳಿಂದ ಇಲಾಖೆಯ ಕ್ರೀಡಾಕೂಟಗಳು ಮತ್ತು ಪರೀಕ್ಷೆಗಳ ಯಶಸ್ವಿ ಆಯೋಜನೆಗೆ ನಿರಂತರ ಸಹಕಾರ ನೀಡುತ್ತಿರುವುದನ್ನು ಶ್ಲಾಘಿಸಿದರು.
ಪ್ರಾಚಾರ್ಯ ಟಿ.ಆರ್. ಕುಲಕರ್ಣಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣ್ಯರನ್ನು ಸನ್ಮಾನಿಸಲಾಯಿತು. ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ಉಪನ್ಯಾಸಕರು ಹಾಗೂ ನಿರ್ಣಾಯಕರು ಯಾವುದೇ ಪಕ್ಷಪಾತವಿಲ್ಲದೆ ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡಿದರು.
ಕ್ರೀಡಾಕೂಟದ ನಿರ್ವಹಣೆಯನ್ನು ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕ ಗಣೇಶ ಗುನ್ನಾಪುರ ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕ ಅಕ್ಷಯಕುಮಾರ ನಾಯಕ ಅಚ್ಚುಕಟ್ಟಾಗಿ ನಿರ್ವಹಿಸಿದರು. ಎಸ್‌.ಎಲ್‌. ಹಳ್ಳದಮನಿ ವಂದನಾರ್ಪಣೆ ಮಾಡಿದರು. ಸುರೇಖಾ ಕುಲಕರ್ಣಿ, ಎಂ.ಎಸ್‌. ಬಿರಾದಾರ ಹಾಗೂ ಎ.ಕೆ. ಸಣ್ಣಿಂಗಮ್ಮನವರ ಕಾರ್ಯಕ್ರಮ ನಿರೂಪಿಸಿದರು.
ಎಸ್‌.ಆರ್‌. ಮುತ್ತಗಿ, ಬಿ.ಎಲ್‌. ನಾಟಿಕಾರ, ಎಸ್‌.ವಿ. ರಜಪೂತ, ಎಂ.ಬಿ. ಹೂಗಾರ ಸೇರಿದಂತೆ ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ಉಪನ್ಯಾಸಕರು, ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಹಾಗೂ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದು, ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದರು.

Share this