ಮಹಿಳೆಗೆ ಸ್ವಾತಂತ್ರ್ಯ ನೀಡಿ ಗೌರವಿಸಿದವರೇ ಶರಣರು: ಡಾ. ರೇಖಾ ಪಾಟೀಲ

ಸಪ್ತಸಾಗರ ವಾರ್ತೆ,ವಿಜಯಪುರ, ಅ. 5:
ಮಹಿಳೆಗೆ ಅಸ್ತಿತ್ವವೇ ಇಲ್ಲದ ಸಂದರ್ಭದಲ್ಲಿ ಆಕೆಗೆ ಸುಂದರ ವ್ಯಕ್ತಿತ್ವ ರೂಪಿಸಿ, ಸ್ವಾತಂತ್ರ್ಯ ಹಾಗೂ ಗೌರವದ ಬದುಕಿಗೆ ಅವಕಾಶ ಕಲ್ಪಿಸಿದ ಶ್ರೇಯಸ್ಸು ಬಸವಾದಿ ಶರಣರಿಗೆ ಸಲ್ಲುತ್ತದೆ ಎಂದು ದಂತವೈದ್ಯೆ ಡಾ. ರೇಖಾ ಪಾಟೀಲ ಹೇಳಿದರು.
ನಗರದ ರಾಧಾಕೃಷ್ಣ ನಗರದಲ್ಲಿರುವ ಶಿವಬಸವ ಯೋಗಾಶ್ರಮದಲ್ಲಿ ನಡೆದ ದತ್ತಿ ಸ್ಮರಣೆ ಹಾಗೂ ಆಶ್ರಮದ 259ನೇ ಶಿವಾನುಭವ ಗೋಷ್ಠಿಯಲ್ಲಿ 12ನೇ ಶತಮಾನದ ಶಿವಶರಣೆಯರ ಅನುಭವ ಕುರಿತು ಅವರು ಮಾತನಾಡಿದರು.
ಶರಣರು ತಮ್ಮ ವಚನಗಳ ಮೂಲಕ ಮಾನವ ಘನತೆ, ಸಮಾನತೆ ಹಾಗೂ ಮೌಲ್ಯಗಳನ್ನು ಎತ್ತಿಹಿಡಿದಿದ್ದಾರೆ. ಮಹಿಳೆಯರಿಗೂ ಪುರುಷರಷ್ಟೇ ಸಮಾನ ಸ್ಥಾನಮಾನ ಹಾಗೂ ಸ್ವಾತಂತ್ರ್ಯ ದೊರೆಯಬೇಕು ಎಂಬ ಆಶಯವನ್ನು ಶರಣರ ವಚನಗಳು ಪ್ರತಿಪಾದಿಸಿವೆ ಎಂದು ಹೇಳಿದರು.
ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಶಾರದಾ ಐಹೊಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಶರಣೆಯರಾದ ಬೊಂತಾದೇವಿ ಹಾಗೂ ದುಗ್ಗಳೆಯರ ಸಾಧನೆ ಕುರಿತು ಮಾತನಾಡಿದರು. ದತ್ತಿ ಸಂಚಾಲಕರಾದ ಶ್ರೀಮತಿ ಶೈಲಜಾ ಬಸವಪ್ರಭು ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಆಶ್ರಮದ ಮಾತೋಶ್ರೀ ದಾನಮ್ಮತಾಯಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ತೆಲಗಿ, ಕಮಲಾ ಗೆಜ್ಜಿ, ವಿದ್ಯಾ ಕೋಟಣ್ಣವರ, ಪುಷ್ಪಾ ಮಹಾಂತಮಠ, ಎಸ್.ಎಸ್. ಪಾಟೀಲ, ಬಿ.ಕೆ. ಕೋಟ್ಯಾಳ, ಈರಣ್ಣ ತೊಂಡಿಕಟ್ಟಿ, ಚಿಮ್ಮಲಗಿಯವರ, ನಾಡಗೌಡರು, ಪ್ರೊ. ಗುಮ್ಮಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this