ಅನುದಾನಿತ-ಅನುದಾನರಹಿತ ಶಾಲೆಗಳ ಉಳಿವಿಗೆ ಸದನ ಸಮಿತಿ ವರದಿ ಜಾರಿಗೊಳಿಸಲು ಆಗ್ರಹ

ಸಪ್ತಸಾಗರ ವಾರ್ತೆ,ವಿಜಯಪುರ, ಅ.5:
ರಾಜ್ಯದಲ್ಲಿರುವ ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗಾಗಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರ ನೇತೃತ್ವದ ಸದನ ಸಮಿತಿ ಸಲ್ಲಿಸಿರುವ ಮಧ್ಯಂತರ ವರದಿಯನ್ನು ಸರ್ಕಾರ ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ವಿಜಯಪುರ ನಗರ ಅನುದಾನಿತ ಮುಖ್ಯೋಪಾಧ್ಯಾಯರ ಮಹಾಮಂಡಳದ ನಿರ್ದೇಶಕ ಎಚ್.ಜಿ. ತೊನಶ್ಯಾಳ ಆಗ್ರಹಿಸಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ರಚನೆಯಾದ ಸದನ ಸಮಿತಿಯು ಪುಟ್ಟಣ್ಣ ಅವರ ಅಧ್ಯಕ್ಷತೆಯಲ್ಲಿ ಹಾಗೂ ಎಂಟು ವಿಧಾನ ಪರಿಷತ್ ಸದಸ್ಯರ ನೇತೃತ್ವದಲ್ಲಿ ಐದು ತಿಂಗಳ ಕಾಲ ಸಮಗ್ರ ಅಧ್ಯಯನ ನಡೆಸಿ, ರಾಜ್ಯದ ಕನ್ನಡ ಮಾಧ್ಯಮ ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಶಾಲಾ-ಕಾಲೇಜುಗಳ ಉಳಿವಿಗಾಗಿ 25 ಪುಟಗಳ ಮಧ್ಯಂತರ ವರದಿಯನ್ನು ಸೆ.9ರಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಹಾಗೂ ಶಿಕ್ಷಣ ಆಯುಕ್ತ ವಿಕಾಸ ಶಿರೋಳಕರ ಅವರಿಗೆ ಸಲ್ಲಿಸಿದೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಎಂ.ಬಿ.ಬಿ.ಎಸ್. 400 ಸೀಟುಗಳನ್ನು ಕಾಯ್ದಿರಿಸುವ ಹಾಗೂ ಶೇ.7.5 ಮೀಸಲಾತಿ ಕಲ್ಪಿಸಿರುವ ಮಾದರಿಯಲ್ಲೇ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೂ ಈ ಮೀಸಲಾತಿ ಸೌಲಭ್ಯವನ್ನು ಅನ್ವಯಿಸುವಂತೆ ಸಮಿತಿ ಶಿಫಾರಸು ಮಾಡಿದೆ. ಈ ಶಿಫಾರಸನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ತೊನಶ್ಯಾಳ ಒತ್ತಾಯಿಸಿದ್ದಾರೆ.
ಸದನ ಸಮಿತಿಯ ವರದಿಯನ್ನು ಶಿಕ್ಷಣ ಸಚಿವರು ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಶೀಘ್ರವಾಗಿ ಅನುಷ್ಠಾನಗೊಳಿಸಿದರೆ ರಾಜ್ಯದಲ್ಲಿ ಕನ್ನಡ ಮಾಧ್ಯಮ ಖಾಸಗಿ ಶಾಲೆಗಳನ್ನು ಉಳಿಸಲು ಸಾಧ್ಯವಾಗಲಿದೆ. ಆದ್ದರಿಂದ ವರದಿಯನ್ನು ಅಂಗೀಕರಿಸಿ ಕೂಡಲೇ ಆದೇಶ ಹೊರಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲೆಗಳ ರಾಜ್ಯಾಧ್ಯಕ್ಷ ಶಿವಾನಂದ ಹಿರೇಕುರಬರ ಹಾಗೂ ವಿಜಯಪುರ ನಗರ ಅನುದಾನಿತ ಮುಖ್ಯೋಪಾಧ್ಯಾಯರ ಮಹಾಮಂಡಳದ ನಿರ್ದೇಶಕ ಎಚ್.ಜಿ. ತೊನಶ್ಯಾಳ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

Share this