ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸಿ: ಆನಂದ್ ಪ್ರಕಾಶ್ ಮೀನಾ
ಸಪ್ತಸಾಗರ ವಾರ್ತೆ,ವಿಜಯಪುರ, ಅ.6:
ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಜಲಜೀವನ್ ಮಿಷನ್ ಸೇರಿದಂತೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬಾಕಿ ಕಾಮಗಾರಿಗಳನ್ನು ಡಿಸೆಂಬರ್ 2026ರೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಅ.5ರಂದು ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಕುಡಿಯುವ ನೀರಿನ ಪರಿಸ್ಥಿತಿ ಹಾಗೂ ವಿವಿಧ ಯೋಜನೆಗಳ ಪ್ರಗತಿ ಪರಿಶೀಲಿಸಿದರು.
ಟಾಸ್ಕ್ಫೋರ್ಸ್ ಅನುದಾನವನ್ನು ಸರ್ಕಾರದ ಮಾರ್ಗಸೂಚಿಯಂತೆ ಸಮರ್ಪಕವಾಗಿ ಬಳಸಬೇಕು. ಅನಗತ್ಯವಾಗಿ ಹೊಸ ಕೊಳವೆಬಾವಿ ಕೊರೆಯುವುದನ್ನು ತಪ್ಪಿಸಿ, ಈಗಾಗಲೇ ಕೊರೆದಿರುವ ಕೊಳವೆಬಾವಿಗಳಿಗೆ ಆದ್ಯತೆಯ ಮೇರೆಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದರು.
841 ಕಾಮಗಾರಿ ಪೂರ್ಣ
ಜಿಲ್ಲೆಯಲ್ಲಿ ಜಲಜೀವನ್ ಮಿಷನ್ನಡಿ ಕೈಗೆತ್ತಿಕೊಂಡಿರುವ 1,000 ಕಾಮಗಾರಿಗಳ ಪೈಕಿ 841 ಪೂರ್ಣಗೊಂಡಿವೆ. ಬಾಕಿ ಇರುವ ಕಾಮಗಾರಿಗಳನ್ನು ವೇಗಗೊಳಿಸಿ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು.
ಜಿಲ್ಲೆಯ 654 ಗ್ರಾಮಗಳ ಪೈಕಿ 379 ಗ್ರಾಮಗಳು ‘ಹರ್ ಘರ್ ಜಲ್’ ಆಪ್ನಲ್ಲಿ ಪ್ರಮಾಣೀಕರಿಸಲ್ಪಟ್ಟಿವೆ. ಉಳಿದ 275 ಗ್ರಾಮಗಳ ಪ್ರಮಾಣೀಕರಣ ಕಾರ್ಯವನ್ನೂ ಇದೇ ಗಡುವಿನೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು.
4.16 ಲಕ್ಷ ಮನೆಗಳಿಗೆ ನಳ ಸಂಪರ್ಕ
ಜಿಲ್ಲೆಯ ಗ್ರಾಮೀಣ ಪ್ರದೇಶದ 4.64 ಲಕ್ಷ ಮನೆಗಳ ಪೈಕಿ 4.16 ಲಕ್ಷ ಮನೆಗಳಿಗೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸಲಾಗಿದೆ. ಉಳಿದ ಮನೆಗಳಿಗೂ ಡಿಸೆಂಬರ್ 2026ರೊಳಗೆ ಸಂಪರ್ಕ ಕಲ್ಪಿಸಬೇಕು ಎಂದು ಮೀನಾ ಸೂಚಿಸಿದರು.
ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ನಳ ಸಂಪರ್ಕ ಕಲ್ಪಿಸಿರುವ ಬಗ್ಗೆಯೂ ಸಭೆಯಲ್ಲಿ ಪರಿಶೀಲನೆ ನಡೆಯಿತು. ಸಂಪರ್ಕ ಬಾಕಿ ಇರುವ ಶಾಲೆಗಳ ಪಟ್ಟಿಯನ್ನು ಪಡೆದು ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.
ಜಲಧಾರೆ ಕಾಮಗಾರಿಗೆ ಚುರುಕು
ಜಲಧಾರೆ ಯೋಜನೆಯ ಸ್ಕೀಮ್–1ರ ಕಾಮಗಾರಿಗಳು ಶೇ.86 ಹಾಗೂ ಸ್ಕೀಮ್–2ರ ಕಾಮಗಾರಿಗಳು ಶೇ.75ರಷ್ಟು ಪ್ರಗತಿ ಸಾಧಿಸಿವೆ. ಸ್ಕೀಮ್–1ರ ಕಾಮಗಾರಿಗಳನ್ನು ಡಿಸೆಂಬರ್ 2026ರೊಳಗೆ ಪೂರ್ಣಗೊಳಿಸಿ, ಮಾರ್ಚ್ 2027ರೊಳಗೆ ಪ್ರಾಯೋಗಿಕ ಚಾಲನೆ ನೀಡಬೇಕು ಎಂದರು.
ಸ್ಕೀಮ್–1ರಡಿ 53 ಹಾಗೂ ಸ್ಕೀಮ್–2ರಡಿ 39 ಓವರ್ಹೆಡ್ ಟ್ಯಾಂಕ್ಗಳಿಗೆ ಅಗತ್ಯ ಜಾಗವನ್ನು ಶೀಘ್ರ ಖರೀದಿಸಿ ಸಿವಿಲ್ ಕಾಮಗಾರಿ ಪೂರ್ಣಗೊಳಿಸಬೇಕು. ಗ್ಯಾಪ್-ಕ್ಲೋಸರ್ ಕಾಮಗಾರಿಗಳಿಗೂ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಕಾಮಗಾರಿ ಸ್ಥಳಗಳಲ್ಲಿ ಅಗತ್ಯ ಕಾರ್ಮಿಕರನ್ನು ನಿಯೋಜಿಸಿ ವೇಗ ಹೆಚ್ಚಿಸಬೇಕು. ಗುತ್ತಿಗೆದಾರರು ಮತ್ತು ಅಧಿಕಾರಿಗಳು ಸಮನ್ವಯದಿಂದ ಕಾರ್ಯಯೋಜನೆ ರೂಪಿಸಿ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ನೀರಿನ ಮಾದರಿ ಪರೀಕ್ಷೆಯನ್ನೂ ತ್ರೈಮಾಸಿಕ ಗುರಿಯಂತೆ ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ವರ್ಧಮಾನ ಗೊಂಗಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


