ಬಿ.ಎಲ್‌.ಡಿ.ಇ ಡೀಮ್ಡ್ ವಿವಿ ಮಹಿಳಾ ಬ್ಯಾಡ್ಮಿಂಟನ್ ತಂಡಕ್ಕೆ ಪ್ರಥಮ ಸ್ಥಾನ

ಸಪ್ತಸಾಗರ ವಾರ್ತೆ,ವಿಜಯಪುರ, ಅ.7: ಮಹಾರಾಷ್ಟ್ರದ ಲೋಣಿಯ ಪ್ರವರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (PIMS) ವತಿಯಿಂದ ಅ.3ರಿಂದ 6ರವರೆಗೆ ಆಯೋಜಿಸಿದ್ದ ‘ಇಗ್ನಿಷಿಯಾ-2026’ ಅಂತರ ವೈದ್ಯಕೀಯ ಮಹಾವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಬಿ.ಎಲ್‌.ಡಿ.ಇ (ಡೀಮ್ಡ್ ವಿಶ್ವವಿದ್ಯಾಲಯ)ದ ಶ್ರೀ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ 27 ವಿದ್ಯಾರ್ಥಿಗಳ ತಂಡ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿದೆ.
ಕ್ರೀಡಾಕೂಟದ ಮಹಿಳಾ ಬ್ಯಾಡ್ಮಿಂಟನ್ ಡಬಲ್ಸ್ ವಿಭಾಗದಲ್ಲಿ ವಿಶ್ವವಿದ್ಯಾಲಯದ ತನುಶ್ರೀ ಪಾಟೀಲ ಹಾಗೂ ಸುಭಗಾ ಪಿ.ಎನ್. ಅವರು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಈ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಇದಲ್ಲದೆ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಫುಟ್‌ಬಾಲ್, ಬ್ಯಾಸ್ಕೆಟ್‌ಬಾಲ್ ಹಾಗೂ ಬ್ಯಾಡ್ಮಿಂಟನ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಕ್ರೀಡಾ ಪ್ರತಿಭೆ ಪ್ರದರ್ಶಿಸಿದರು.
ಸಾಧಕ ಕ್ರೀಡಾಪಟುಗಳು ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳನ್ನು ಬಿ.ಎಲ್‌.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ.ಎಂ. ಜಯರಾಜ, ಕುಲಪತಿ ಡಾ. ಅರುಣ ಇನಾಮದಾರ, ಕುಲಸಚಿವ ಡಾ. ಆರ್.ವಿ. ಕುಲಕರ್ಣಿ, ಪ್ರಾಚಾರ್ಯೆ ಹಾಗೂ ಡೀನ್ ಡಾ. ತೇಜಸ್ವಿನಿ ವಲ್ಲಭ, ವಿದ್ಯಾರ್ಥಿ ಕಲ್ಯಾಣ ಮತ್ತು ಕ್ರೀಡಾ ವಿಭಾಗದ ಡೀನ್ ಡಾ. ಗಿರೀಶ ಕುಲ್ಲೊಳ್ಳಿ ಹಾಗೂ ಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕಿ ಡಾ. ಮಹಾದೇವಿ ವಾಲಿ ಅಭಿನಂದಿಸಿದ್ದಾರೆ.

Share this