ಜೆಡಿಎಸ್ ಕಚೇರಿಯಲ್ಲಿ ಲೋಕನಾಯಕನ 124ನೇ ಜಯಂತಿ ಆಚರಣೆ
ಸಪ್ತಸಾಗರ ವಾರ್ತೆ,ವಿಜಯಪುರ, ಅ. 11:
ಅನ್ಯಾಯ, ಭ್ರಷ್ಟಾಚಾರ ಹಾಗೂ ಶೋಷಣೆಯ ವಿರುದ್ಧ ನಿರಂತರ ಹೋರಾಡಿದ ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ರೈತ ನಾಯಕ ಪಂಚಪ್ಪ ಕಲಬುರಗಿ ಹೇಳಿದರು.
ನಗರದ ಜನತಾದಳ (ಜಾತ್ಯತೀತ) ಪಕ್ಷದ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಜಯಪ್ರಕಾಶ ನಾರಾಯಣ ಅವರ 124ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆ.ಪಿ. ಅವರು ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ ಮಹಾನ್ ಜನನಾಯಕ ಹಾಗೂ ದೇಶಪ್ರೇಮಿಯಾಗಿದ್ದರು ಎಂದು ಸ್ಮರಿಸಿದರು.
‘ಜೆ.ಪಿ.’ ಹಾಗೂ ‘ಲೋಕನಾಯಕ’ ಎಂದೇ ಜನಪ್ರಿಯರಾಗಿದ್ದ ಅವರು ಮಹಾತ್ಮ ಗಾಂಧಿ ಸೇರಿದಂತೆ ಹಲವು ನಾಯಕರ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಸಮಾಜಸೇವೆ ಹಾಗೂ ಜನಪರ ಹೋರಾಟಗಳಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. 1970ರ ದಶಕದಲ್ಲಿ ಭ್ರಷ್ಟಾಚಾರ ಮತ್ತು ಅನ್ಯಾಯದ ವಿರುದ್ಧ ಜನಾಂದೋಲನಕ್ಕೆ ನಾಯಕತ್ವ ನೀಡಿ, ‘ಸಂಪೂರ್ಣ ಕ್ರಾಂತಿ’ ಮೂಲಕ ಸಾಮಾಜಿಕ ಹಾಗೂ ರಾಜಕೀಯ ಬದಲಾವಣೆಗೆ ಕರೆ ನೀಡಿದ್ದರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಖಾದ್ರಿ ಇನಾಮದಾರ ಮಾತನಾಡಿ,
ದೇಶಕ್ಕೆ ಹಾಗೂ ಸಮಾಜಕ್ಕೆ ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ. ಸಾರ್ವಜನಿಕ ಸೇವೆಗಾಗಿ 1965ರಲ್ಲಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯೂ ಲಭಿಸಿತ್ತು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರಾಜು ಹಿಪ್ಪರಗಿ, ವಿಜಯಪುರ ನಗರ ಅಧ್ಯಕ್ಷ ಪ್ರಶಾಂತ ಎಸ್. ಕಿಣಗಿ, ಸಂಜೀವ ಹಿರೇಮಠ, ಮುತ್ತುರಾಜ ಜಂಗಮಶೆಟ್ಟಿ, ಮಲ್ಲು ತೊರವಿ, ಸಿದ್ದನಗೌಡ ಪಾಟೀಲ, ದುರ್ಗದ್ ವಕೀಲರು, ರಾಜು ರಜಪೂತ್, ಎಸ್.ಎ. ಕಿಣಗಿ, ಪರಶುರಾಮ ರೋಣಿಹಾಳ, ಬಾಬು ಶಿರಂಗಾರ್, ಎಸ್.ವೈ. ನಡುವಿನಕೇರಿ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


