ಸಪ್ತಸಾಗರ ವಾರ್ತೆ,ವಿಜಯಪುರ, ಅ. 11: ಹೈಕೋರ್ಟ್ ಆದೇಶದಂತೆ 1996ಕ್ಕಿಂತ ಮೊದಲು ನೇಮಕಗೊಂಡ ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರಿಗೆ ಡಿ.ಎ., ಎಚ್.ಆರ್.ಎ., ಎಕ್ಸ್ಗ್ರೇಷಿಯಾ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ತಕ್ಷಣ ಕಲ್ಪಿಸಬೇಕು. ಅಲ್ಲದೆ, ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ ಹಾಗೂ ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಸಂಜಯ ಜೋಶಿ ಆಗ್ರಹಿಸಿದರು.
ನಗರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಗೂಲಿ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಳಂಬ ಮಾಡಬಾರದು. ಇಲ್ಲವಾದರೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವ ಅನಿವಾರ್ಯತೆ ಎದುರಾಗಲಿದೆ ಎಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯ ದಿನಗೂಲಿ ಕ್ಷೇಮಾಭಿವೃದ್ಧಿ ವಿಧೇಯಕ-2012ನ್ನು 2013ರ ಫೆ.15ರಂದು ಜಾರಿಗೊಳಿಸಿದರೂ, ನೌಕರರಿಗೆ ದೊರೆಯಬೇಕಾದ ಹಲವು ಸೌಲಭ್ಯಗಳನ್ನು ಕಡಿತಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಡೆದ ಸುದೀರ್ಘ ಕಾನೂನು ಹೋರಾಟದ ಫಲವಾಗಿ ಹೈಕೋರ್ಟ್ 2026ರ ಫೆ.2ರಂದು 1996ಕ್ಕಿಂತ ಮೊದಲು ನೇಮಕಗೊಂಡ ನೌಕರರಿಗೆ ಪೂರ್ಣ ಪ್ರಮಾಣದ ಸೌಲಭ್ಯ ಕಲ್ಪಿಸುವಂತೆ ಆದೇಶಿಸಿದೆ ಎಂದು ತಿಳಿಸಿದರು.
ಒಕ್ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ ಬುರಾಣಪೂರ ಮಾತನಾಡಿ, ಅರ್ಹ ನೌಕರರಿಗೆ ಸೇವಾ ಸಕ್ರಮೀಕರಣ, ವೇತನ ಶ್ರೇಣಿ, ನಿವೃತ್ತಿ ಹಾಗೂ ಇತರ ಸಾಮಾಜಿಕ ಭದ್ರತಾ ಸೌಲಭ್ಯ ಕಲ್ಪಿಸಿ, ದಿನಗೂಲಿ ನೌಕರರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಮುಖಂಡ ಲಕ್ಷ್ಮಣ ಹಂದ್ರಾಳ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಕೊಂಡಗೂಳಿ, ಎಂ.ಕೆ. ಕುಲಕರ್ಣಿ, ಕೆ.ಎಂ. ಒಣಕುದರಿ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ದಿನಗೂಲಿ ನೌಕರರಿಗೆ ಸೌಲಭ್ಯ ಕಲ್ಪಿಸಲು ಆಗ್ರಹ


