ಸಪ್ತಸಾಗರ ವಾರ್ತೆ,ವಿಜಯಪುರ, ಅ. 13:
ಭಾರತೀಯ ಅಂಚೆ ಇಲಾಖೆಯ ವಿಜಯಪುರ ವಿಭಾಗದ ವತಿಯಿಂದ 2026-27ನೇ ಸಾಲಿನ ವಿಭಾಗೀಯ ಅಂಚೆ ಅದಾಲತ್ ಅ. 21ರಂದು ಮಧ್ಯಾಹ್ನ 3 ಗಂಟೆಗೆ ವಿಜಯಪುರದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನಡೆಯಲಿದೆ.
ವಿಜಯಪುರ ಅಂಚೆ ವಿಭಾಗದ ವ್ಯಾಪ್ತಿಯ ಬಬಲೇಶ್ವರ, ಬಸವನಬಾಗೇವಾಡಿ, ಚಡಚಣ, ದೇವರಹಿಪ್ಪರಗಿ, ಇಂಡಿ, ಕೊಲ್ಹಾರ, ಮುದ್ದೇಬಿಹಾಳ, ನಿಡಗುಂದಿ, ಸಿಂದಗಿ, ತಾಳಿಕೋಟೆ, ತಿಕೋಟಾ, ಆಲಮೇಲ ಹಾಗೂ ವಿಜಯಪುರ ತಾಲೂಕುಗಳ ಅಂಚೆ ಸೇವೆಗಳಿಗೆ ಸಂಬಂಧಿಸಿದ ದೂರು, ಸಲಹೆ ಮತ್ತು ಸೂಚನೆಗಳನ್ನು ಸಾರ್ವಜನಿಕರು ಸಲ್ಲಿಸಬಹುದು.
ಅಹವಾಲುಗಳನ್ನು ಲಿಖಿತ ರೂಪದಲ್ಲಿ ಸಿದ್ಧಪಡಿಸಿ, ಲಕೋಟೆಯ ಮೇಲೆ ‘ಅಂಚೆ ಅದಾಲತ್ನಲ್ಲಿ ವಿಚಾರಣೆಗೆ’ ಎಂದು ನಮೂದಿಸಿ ಯಾವುದೇ ಅಂಚೆ ಕಚೇರಿಯಲ್ಲಿ ಸಲ್ಲಿಸಬಹುದು. ಇಂತಹ ಲಕೋಟೆಗಳಿಗೆ ಅಂಚೆ ವೆಚ್ಚ ಪಾವತಿಸುವ ಅಗತ್ಯವಿಲ್ಲ. ಅಹವಾಲುಗಳು ಅ. 16ರೊಳಗೆ ಅಂಚೆ ಅಧೀಕ್ಷಕರು, ವಿಜಯಪುರ ವಿಭಾಗ, ವಿಜಯಪುರ–586104 ಕಚೇರಿಗೆ ತಲುಪುವಂತೆ ಕಳುಹಿಸಬೇಕು.
ವಿಜಯಪುರ ವಿಭಾಗದ ಅಂಚೆ ಕಚೇರಿಗಳಲ್ಲಿ ಪ್ರಸ್ತುತ ಒದಗಿಸಲಾಗುತ್ತಿರುವ ಸೇವೆಗಳಲ್ಲಿನ ಕೊರತೆ ಹಾಗೂ ಅವುಗಳ ಸುಧಾರಣೆಗೆ ಸಂಬಂಧಿಸಿದ ಸಲಹೆ–ಸೂಚನೆಗಳನ್ನು ಮಾತ್ರ ಅದಾಲತ್ನಲ್ಲಿ ಪರಿಗಣಿಸಲಾಗುವುದು. ಇಲಾಖೆಯ ಕಾರ್ಯನೀತಿ ಮತ್ತು ಧೋರಣೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲಾಗುವುದಿಲ್ಲ.
ಇಂತಹ ವಿಷಯಗಳ ಕುರಿತು ಪ್ರತ್ಯೇಕವಾಗಿ ಲಿಖಿತ ರೂಪದಲ್ಲಿ ಸಲ್ಲಿಸಿದಲ್ಲಿ, ಅವುಗಳನ್ನು ಮೇಲಾಧಿಕಾರಿಗಳಿಗೆ ಕಳುಹಿಸಲಾಗುವುದು ಎಂದು ವಿಜಯಪುರ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


