ವಿಜಯಪುರದಲ್ಲಿ ಕುರುಬ ಸಮಾಜದಿಂದ ಸರ್ಕಾರಕ್ಕೆ ಮನವಿ
ಸಪ್ತಸಾಗರ ವಾರ್ತೆ,ವಿಜಯಪುರ, ಅ. 13:
ಕುರುಬ ಸಮುದಾಯದ ವಿಶಿಷ್ಟ ಕಲೆ, ಸಂಸ್ಕೃತಿ ಮತ್ತು ಜಾನಪದ ಪರಂಪರೆಯ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಕೂಡಲೇ ಕುರುಬರ ಕಲೆ ಮತ್ತು ಸಂಸ್ಕೃತಿ ಅಕಾಡೆಮಿ ಸ್ಥಾಪಿಸಬೇಕು ಎಂದು ಕುರುಬ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.
ಕುರುಬ ಸಮುದಾಯವು ಶತಮಾನಗಳಿಂದ ಉಳಿಸಿಕೊಂಡು ಬಂದಿರುವ ಡೊಳ್ಳಿನ ಪದ, ಡೊಳ್ಳಿನ ಕೈಪಟ್ಟು, ಡೊಳ್ಳಿನ ವಾಲಗ, ಡೊಳ್ಳು ಕುಣಿತ, ದಟ್ಟಿ ಕುಣಿತ, ಗೊರವರ ಕುಣಿತ, ವೀರಮಕ್ಕಳ ಕುಣಿತ, ವಗ್ಗಯ್ಯರ ಪದ–ಕುಣಿತ, ಟಗರಜೋಗಿ ಕಲೆ, ಚೌಘಡ ವಾದನ, ತಾಳವಾದನ, ಹರಕೆ ಹಾಡು, ಹೊಳೆ ಪೂಜೆ ಹಾಡು ಸೇರಿದಂತೆ ಹತ್ತಾರು ವಿಶಿಷ್ಟ ಕಲಾ ಪ್ರಕಾರಗಳು ಇಂದು ಸಂರಕ್ಷಣೆಯ ಅಗತ್ಯದಲ್ಲಿವೆ.
ಇಂತಹ ಅಪರೂಪದ ಕಲೆಗಳು ಹಾಗೂ ಸಾಂಸ್ಕೃತಿಕ ಆಚರಣೆಗಳು ಮುಂದಿನ ಪೀಳಿಗೆಗೆ ಉಳಿಯಬೇಕಾದರೆ ಅವುಗಳಿಗೆ ಸಂಸ್ಥಾತ್ಮಕ ಬೆಂಬಲ ಮತ್ತು ಶಾಶ್ವತ ವೇದಿಕೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತ್ಯೇಕ ಕುರುಬರ ಕಲೆ ಮತ್ತು ಸಂಸ್ಕೃತಿ ಅಕಾಡೆಮಿ ಸ್ಥಾಪನೆಯೊಂದೇ ಸೂಕ್ತ ಪರಿಹಾರವಾಗಿದೆ ಎಂದು ಸಮಾಜದ ಮುಖಂಡರು ಅಭಿಪ್ರಾಯಪಟ್ಟರು.
ಕುರುಬ ಸಮುದಾಯದ ಕಲೆ, ಸಂಸ್ಕೃತಿ, ಜಾನಪದ ಪರಂಪರೆ, ಕುರಿ ಸಾಕಾಣಿಕೆ, ಪಶುಪಾಲನೆ, ಕಂಬಳಿ ನೇಯ್ಗೆ ಸೇರಿದಂತೆ ಸಾಂಪ್ರದಾಯಿಕ ಜೀವನ ಪದ್ಧತಿಗಳ ಅಧ್ಯಯನ, ದಾಖಲಾತಿ, ಸಂರಕ್ಷಣೆ ಮತ್ತು ಪ್ರಚಾರಕ್ಕೆ ಅಕಾಡೆಮಿ ಪ್ರಮುಖ ವೇದಿಕೆಯಾಗಲಿದೆ. ಅಲ್ಲದೆ, ಗ್ರಾಮೀಣ ಭಾಗದಲ್ಲಿರುವ ಕಲಾವಿದರನ್ನು ಗುರುತಿಸಿ ಅವರಿಗೆ ತರಬೇತಿ, ಪ್ರೋತ್ಸಾಹ ಹಾಗೂ ಸಾಂಸ್ಕೃತಿಕ ಅವಕಾಶಗಳನ್ನು ಕಲ್ಪಿಸಲು ಸಾಧ್ಯವಾಗಲಿದೆ.
ಕುರುಬರ ಕಲೆ ಮತ್ತು ಸಂಸ್ಕೃತಿ ಅಕಾಡೆಮಿ ಸ್ಥಾಪನೆಯಿಂದ ಅಳಿವಿನಂಚಿನಲ್ಲಿರುವ ಅನೇಕ ಜಾನಪದ ಕಲೆಗಳಿಗೆ ಪುನಶ್ಚೇತನ ದೊರೆಯಲಿದೆ. ಆದ್ದರಿಂದ ಸರ್ಕಾರ ಯಾವುದೇ ವಿಳಂಬ ಮಾಡದೆ ಅಕಾಡೆಮಿ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ಈ ಕುರಿತು ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದು ಧನಗೊಂಡ, “ಕುರುಬರ ಕಲೆ ಮತ್ತು ಸಂಸ್ಕೃತಿ ಅಕಾಡೆಮಿ ಸ್ಥಾಪನೆಯಾದರೆ ಸಮುದಾಯದ ಅಪರೂಪದ ಕಲೆಗಳನ್ನು ಉಳಿಸಿ ಬೆಳೆಸಲು ರಕ್ಷಣಾ ಕವಚ ದೊರೆತಂತಾಗುತ್ತದೆ” ಎಂದು ಹೇಳಿದರು.
ಸಮಾಜದ ಮುಖಂಡರಾದ ಸತೀಶ ಅಡವಿ, ಮಲ್ಲು ಬಿದರಿ, ಮಲ್ಲಪ್ಪ ಶಿರಶ್ಯಾಡ, ರಾಜು ಕಗ್ಗೋಡ, ಸಿದ್ದರಾಮ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


