ರೂ.3.42 ಕೋಟಿ ಕಾಮಗಾರಿಗಳಿಗೆ ಯತ್ನಾಳ ಭೂಮಿಪೂಜೆ

ಸಪ್ತಸಾಗರ ವಾರ್ತೆ,ವಿಜಯಪುರ, ಅ. 13:
ನಗರದ ವಾರ್ಡ್‌ ನಂ.23ರಲ್ಲಿ ರೂ.3.42 ಕೋಟಿ ಅನುದಾನದಲ್ಲಿ ಕೈಗೊಳ್ಳಲಾಗುತ್ತಿರುವ ಒಳಚರಂಡಿ ಹಾಗೂ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.
ಮರಾಠಿ ವಿದ್ಯಾಲಯದ ಬಳಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯ 2ನೇ ಹಂತದಲ್ಲಿ ಮಂಜೂರಾದ ರೂ.1 ಕೋಟಿ ವೆಚ್ಚದಲ್ಲಿ ಕೊತ್ವಾಲ್ ಬಿಲ್ಡಿಂಗ್‌ನಿಂದ ಮರಾಠಿ ವಿದ್ಯಾಲಯದವರೆಗೆ, ಮನಗೂಳಿ ಅಗಸಿ ಟೆಕಡೆ ಗಲ್ಲಿಯ ಪಶ್ಚಿಮ ಭಾಗ ಹಾಗೂ ನಾಗರ ಬಾವಡಿ ಗಲ್ಲಿಯ ಪಶ್ಚಿಮ ಭಾಗದಲ್ಲಿ ಆಂತರಿಕ ಒಳಚರಂಡಿ ಮತ್ತು ಸಿಸಿ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗೆ ಚಾಲನೆ ನೀಡಲಾಯಿತು.
ಅದೇ ವೇಳೆ 2026-27ನೇ ಸಾಲಿನ 16ನೇ ಹಣಕಾಸು ಯೋಜನೆಯಡಿ ಮಂಜೂರಾದ ರೂ.42 ಲಕ್ಷದಲ್ಲಿ ಮರಾಠಿ ವಿದ್ಯಾಲಯದ ಮುಂಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿಗೂ ಭೂಮಿಪೂಜೆ ನೆರವೇರಿಸಲಾಯಿತು. ಬಳಿಕ ಗಲಗಲಿ ಕಾಲೊನಿಯಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯ 2ನೇ ಹಂತದಲ್ಲಿ ಮಂಜೂರಾದ ರೂ.2 ಕೋಟಿ ವೆಚ್ಚದಲ್ಲಿ ಆಂತರಿಕ ಒಳಚರಂಡಿ ಹಾಗೂ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಯತ್ನಾಳ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಶಾಸಕ ಯತ್ನಾಳ ಆಲಿಸಿದರು.
ಮಹಾನಗರ ಪಾಲಿಕೆ ಉಪಮೇಯರ್ ಸುಮಿತ್ರಾ ಜಾಧವ, ಸದಸ್ಯರಾದ ಪ್ರೇಮಾನಂದ ಬಿರಾದಾರ, ಗಿರೀಶ ಪಾಟೀಲ, ಆಯುಕ್ತ ವಿಜಯಕುಮಾರ್ ಮೆಕ್ಕಳಕಿ, ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ಚಂದ್ರಶೇಖರ ಚೌಧರಿ, ರಾಚು ಬಿರಾದಾರ, ಮಂಥನ್ ಗಾಯಕವಾಡ, ರವಿ ಕುಲಕರ್ಣಿ, ತುಷಾರ ಪವಾರ, ದೋಂಡಿಬಾ ಗಾಯಕವಾಡ, ಸಚಿನ ಘಾಟಕೆ ಸೇರಿದಂತೆ ಮುಖಂಡರು, ಕಾರ್ಯಕರ್ತರು, ಹಿತೈಷಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Share this