ಯುವ ಸಂಸತ್‌ನಲ್ಲಿ ವಿದ್ಯಾರ್ಥಿಗಳಿಂದ ಅರ್ಥಪೂರ್ಣ ಚರ್ಚೆ

ಸಪ್ತಸಾಗರ ವಾರ್ತೆ,ವಿಜಯಪುರ, ಅ. 14:
ತಿಕೋಟಾ ಪಟ್ಟಣದ ಹಜಿಮಸ್ತಾನಿ ಶಾದಿ ಮಹಲ್‌ನಲ್ಲಿ ಅ.13ರಂದು ನಡೆದ ಯುವ ಸಂಸತ್ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ 250 ವಿದ್ಯಾರ್ಥಿಗಳು ಭಾಗವಹಿಸಿ, ಸಂಸದೀಯ ಕಲಾಪದ ಮಾದರಿಯನ್ನು ಸಮರ್ಥವಾಗಿ ಪ್ರಸ್ತುತಪಡಿಸಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಪೀಠಿಕಾ ವಾಚನ ಹಾಗೂ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಅಧ್ಯಕ್ಷತೆ ವಹಿಸಿದ್ದ ತಿಕೋಟಾ ತಹಶೀಲ್ದಾರ್ ಸುರೇಶ ಚವಲರ್ ಮಾತನಾಡಿ, ಯುವ ಸಂಸತ್ ಕೇವಲ ಅಣಕು ಪ್ರದರ್ಶನವಲ್ಲ; ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಯುವಜನರ ಮನಸ್ಸಿನಲ್ಲಿ ಬಿತ್ತುವ ವೇದಿಕೆಯಾಗಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಲು ಹಾಗೂ ಸಾರ್ವಜನಿಕ ಸಮಸ್ಯೆಗಳ ಕುರಿತು ಚರ್ಚಿಸುವ ಮನೋಭಾವ ರೂಪಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದರು.
ಯುವ ಸಂಸತ್‌ನ ಅಣಕು ಅಧಿವೇಶನದಲ್ಲಿ ವಿದ್ಯಾರ್ಥಿಗಳು ಮುಖ್ಯಮಂತ್ರಿ, ಸಭಾಧ್ಯಕ್ಷ, ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ಪಾತ್ರಗಳನ್ನು ನಿರ್ವಹಿಸಿ ನೈಜ ವಿಧಾನಸಭೆಯ ವಾತಾವರಣ ನಿರ್ಮಿಸಿದರು. ರೈತರ ಸಮಸ್ಯೆಗಳು, ನೀರಿನ ಸಮಸ್ಯೆ, ಶಿಕ್ಷಣ ಹಾಗೂ ಮಹಿಳೆಯರು ಮತ್ತು ಯುವ ಸಬಲೀಕರಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಿತು. ವಿರೋಧ ಪಕ್ಷದ ಸದಸ್ಯರು ಪ್ರಶ್ನೆಗಳ ಮೂಲಕ ಆಡಳಿತ ಪಕ್ಷದ ಗಮನ ಸೆಳೆದರೆ, ಆಡಳಿತ ಪಕ್ಷ ಸಮರ್ಥವಾಗಿ ಉತ್ತರಿಸುವ ಮೂಲಕ ಸದನವನ್ನು ಮುನ್ನಡೆಸಿತು.
ವಿದ್ಯಾರ್ಥಿಗಳ ಪ್ರಸ್ತುತಿಯನ್ನು ಮೆಚ್ಚಿದ ತಹಶೀಲ್ದಾರ್, ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಪರಸ್ಪರ ಗೌರವದಂತಹ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ 17 ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟದ ಸಂಸತ್ ಅಧಿವೇಶನಕ್ಕೆ ಆಯ್ಕೆ ಮಾಡಲಾಯಿತು. ಈ ತಂಡ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ತಿಕೋಟಾ ತಾಲೂಕಿಗೆ ಕೀರ್ತಿ ತರಲಿ ಎಂದು ತಹಶೀಲ್ದಾರ್ ಶುಭ ಹಾರೈಸಿದರು.
ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆನಂದ ಮಾಯಗೇರಿ, ಶಿರಸ್ತೇದಾರ್ ರಾಜು ಸುಣಗಾರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಘು ನಡುವಿನಮನಿ, ಗ್ರಾಮೀಣ ವಲಯ ಬಿಆರ್‌ಸಿ ಡಿ.ಪಿ. ಕಾಂಬಳೆ, ಬಿಎಲ್‌ಡಿಇ ಪಿಯು ಕಾಲೇಜು ಪ್ರಾಚಾರ್ಯೆ ಕವಿತಾ ಹೊಸಟಿ, ಬಿಎಲ್‌ಡಿಇ ನೂತನ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಮುಖ್ಯಗುರು ಮಂಜುನಾಥ ಐಹೊಳೆ, ಉಪನ್ಯಾಸಕ ಸಂತೋಷ ಹೆಗಡೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು ಹಾಗೂ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Share this