3,657 ಹೊರಗುತ್ತಿಗೆ ನೌಕರರ ಸೇವಾಭದ್ರತೆಗೆ ಆಗ್ರಹ

ಅ.16ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ

ಸಪ್ತಸಾಗರ ವಾರ್ತೆ,ವಿಜಯಪುರ, ಅ. 15:
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ)ಯಡಿ ಕಳೆದ 12ರಿಂದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಾಗೂ ಇದೀಗ ‘ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕ ಮಿಷನ್ (ಗ್ರಾಮೀಣ)’ (ವಿಬಿ-ಜಿ ರಾಮ್‌ಜಿ) ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ 3,657ಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರ ಸೇವಾಭದ್ರತೆಗೆ ಆಗ್ರಹಿಸಿ ಅ.16ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಮಹಾತ್ಮಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ಪೃಥ್ವಿರಾಜ ಪಾಟೀಲ ತಿಳಿಸಿದ್ದಾರೆ.
2008ರಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ತಂತ್ರಾಂಶ ಹಾಗೂ ಯೋಜನಾ ಕಾರ್ಯಗಳನ್ನು ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಇದುವರೆಗೂ ಸೂಕ್ತ ಸೇವಾಭದ್ರತೆ ಕಲ್ಪಿಸಿಲ್ಲ. ಹೊಸ ಯೋಜನೆಯಡಿ ಹಾಲಿ ಸಿಬ್ಬಂದಿಯನ್ನು ಮುಂದುವರಿಸುವ ಕುರಿತು ತಕ್ಷಣವೇ ಅಧಿಕೃತ ಆದೇಶ ಹೊರಡಿಸಬೇಕು ಎಂದು ಸಂಘ ಆಗ್ರಹಿಸಿದೆ.
ಸುದೀರ್ಘ ಸೇವೆ ಪರಿಗಣಿಸಿ ನೌಕರರಿಗೆ ಸೇವಾ ಭದ್ರತೆಯೊಂದಿಗೆ ಹುದ್ದೆ ಖಾಯಂ ಮಾಡಬೇಕು. ಮುಂಬರುವ ಆರ್‌ಡಿಪಿಆರ್ ನೇಮಕಾತಿಗಳಲ್ಲಿ ಸೇವಾನುಭವಕ್ಕೆ ವೈಟೇಜ್, ಗರಿಷ್ಠ 30 ಕೃಪಾಂಕ ಹಾಗೂ ವಯೋಮಿತಿ ಸಡಿಲಿಕೆ ನೀಡಬೇಕು. ಪಂಚಾಯತ್ ರಾಜ್ ಅಧಿನಿಯಮದ ಕಲಂ 113-ಎ ಅನ್ವಯ ಗ್ರಾಮ ಪಂಚಾಯಿತಿ ತಾಂತ್ರಿಕ ಸಿಬ್ಬಂದಿಗೆ ಮನ್ನಣೆ ನೀಡಬೇಕು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.
ಜಿಲ್ಲಾ ಪಂಚಾಯಿತಿ ಮಟ್ಟದ DMIS, DIEC, DAM ಸಿಬ್ಬಂದಿಗೆ ನೀಡುವಂತೆ ತಾಲೂಕು ಪಂಚಾಯಿತಿಯ TIEC, TMIS ಹಾಗೂ ಆಡಳಿತ ಸಹಾಯಕರಿಗೂ ಸಮಾನ ವೇತನ ನಿಗದಿಪಡಿಸಬೇಕು. ಹೊಸ MIS ಮತ್ತು IEC ನೇಮಕಾತಿಯಲ್ಲಿ ಹಾಲಿ ನೌಕರರಿಗೆ ಮೊದಲ ಆದ್ಯತೆ ನೀಡಬೇಕು. IEC ಸಿಬ್ಬಂದಿಯ ಹುದ್ದೆಯನ್ನು ‘ಆರ್‌ಡಿಪಿಆರ್ ಐಇಸಿ ಕಾರ್ಯಕ್ರಮ ವ್ಯವಸ್ಥಾಪಕರು/ಆರ್‌ಡಿಪಿಆರ್ PRO’ ಎಂದು ಮರುನಾಮಕರಣ ಮಾಡಿ, ಮೂಲ ವೇತನಕ್ಕೆ ಶೇ.25ರಷ್ಟು ಹೆಚ್ಚಳ ಹಾಗೂ ವಾರ್ಷಿಕ ಶೇ.10ರಷ್ಟು ವೇತನ ಹೆಚ್ಚಳ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಪ್ರತಿ ತಿಂಗಳ 5ನೇ ತಾರೀಖಿನೊಳಗೆ ವೇತನ ಪಾವತಿಯಾಗುವಂತೆ ಕ್ರಮ ಕೈಗೊಳ್ಳಬೇಕು. ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಜಾರಿಗೊಳಿಸುವ ಜತೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಸ್ಯಾಲರಿ ಪ್ಯಾಕೇಜ್ ಖಾತೆಗೆ ಸಂಬಂಧಿಸಿದ ಕಡತಕ್ಕೆ ಅಂತಿಮ ಅನುಮೋದನೆ ನೀಡಬೇಕು. ಪ್ರಯಾಣ ಭತ್ಯೆಯನ್ನು ರೂ.5,000ಕ್ಕೆ ಹೆಚ್ಚಿಸಿ ವೇತನದೊಂದಿಗೆ ಪಾವತಿಸಬೇಕು. ಕ್ಷೇತ್ರ ಕಾರ್ಯ ನಿರ್ವಹಿಸುವ TMIS ಹಾಗೂ ಆಡಳಿತ ಸಹಾಯಕರಿಗೂ ಪ್ರಯಾಣ ಭತ್ಯೆ ವಿಸ್ತರಿಸಬೇಕು ಎಂದು ಸಂಘ ಒತ್ತಾಯಿಸಿದೆ.
ಏಜೆನ್ಸಿಗಳು ವೇತನ, ಪಿಎಫ್ ಮತ್ತು ಇಎಸ್‌ಐ ಪಾವತಿಯ ರಸೀದಿ ಸಲ್ಲಿಸಿದ ನಂತರವೇ ಜಿಲ್ಲಾ ಪಂಚಾಯಿತಿಯಿಂದ ಹಣ ಬಿಡುಗಡೆ ಮಾಡಬೇಕು. ಈ ಹಿಂದೆ ಪಿಎಫ್ ಹಣ ದುರುಪಯೋಗಪಡಿಸಿಕೊಂಡ ಏಜೆನ್ಸಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. 10 ವರ್ಷ ಸೇವೆ ಸಲ್ಲಿಸಿದವರಿಗೆ ಗ್ರಾಚ್ಯುಟಿ, ಅಂತರ ಜಿಲ್ಲಾ ವರ್ಗಾವಣೆ ಸೌಲಭ್ಯ ಹಾಗೂ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ನಿಯಮಿತ ಕುಂದುಕೊರತೆ ಸಭೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ.
ಇದಲ್ಲದೆ, ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ನೌಕರರಿಗೆ ಸಮರ್ಪಕ ಆರೋಗ್ಯ ಸೇವೆ ದೊರೆಯುವಂತೆ ಕ್ರಮ ಕೈಗೊಂಡು ಕ್ಯಾಶ್‌ಲೆಸ್ ಹಾಗೂ ಮರುಪಾವತಿ ಸೌಲಭ್ಯ ಖಾತರಿಪಡಿಸಬೇಕು. ತಾಂತ್ರಿಕ ಸಹಾಯಕರಿಗೆ ಪ್ರತ್ಯೇಕ Secure ಮತ್ತು E-MB ಲಾಗಿನ್ ವ್ಯವಸ್ಥೆ ಕಲ್ಪಿಸಬೇಕು. ವೈದ್ಯಕೀಯ ರಜೆ, ಪಿತೃತ್ವ ರಜೆ ಹಾಗೂ ಮಹಿಳಾ ಸಿಬ್ಬಂದಿಗೆ ವರ್ಷಕ್ಕೆ 12 ದಿನಗಳ ವೇತನ ಸಹಿತ ಋತುಚಕ್ರ ರಜೆ ಮಂಜೂರು ಮಾಡಬೇಕು ಎಂಬ ಬೇಡಿಕೆಗಳನ್ನೂ ಮುಂದಿಡಲಾಗಿದೆ.

‘ಇದು ಅಸ್ತಿತ್ವ ಮತ್ತು ಸ್ವಾಭಿಮಾನದ ಹೋರಾಟ’

ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸಿ ಸರ್ಕಾರಕ್ಕೆ ಪ್ರಶಸ್ತಿಗಳನ್ನು ತಂದುಕೊಡುವಲ್ಲಿ ನೌಕರರ ಪಾತ್ರ ಮಹತ್ವದ್ದಾಗಿದೆ. ಕಳೆದ ವರ್ಷ ಜಲಶಕ್ತಿ ಅಭಿಯಾನದ ಅನುಷ್ಠಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜಿಲ್ಲೆಗೆ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳು ದೊರೆಯುವಲ್ಲಿ ನೌಕರರ ಕೊಡುಗೆ ಇದೆ. ಇಂತಹ ಸಂದರ್ಭದಲ್ಲಿ ಆರು ತಿಂಗಳವರೆಗೆ ವೇತನ ತಡೆಹಿಡಿಯುವುದು ಸರಿಯಲ್ಲ. ಇದು ಕೇವಲ ವೇತನದ ಪ್ರಶ್ನೆಯಲ್ಲ; ನಮ್ಮ ಅಸ್ತಿತ್ವ ಮತ್ತು ಸ್ವಾಭಿಮಾನದ ಹೋರಾಟವಾಗಿದೆ ಎಂದು ಸಂಘದ ವಿಜಯಪುರ ಜಿಲ್ಲಾ ಉಪಾಧ್ಯಕ್ಷ ಕಲ್ಲಪ್ಪ ನಂದರಗಿ ತಿಳಿಸಿದ್ದಾರೆ.
ಅ.16ರ ಪ್ರತಿಭಟನೆ ಸಾಂಕೇತಿಕವಾಗಿದ್ದು, ಸರ್ಕಾರ ತಕ್ಷಣ ಸೇವಾ ಮುಂದುವರಿಕೆ ಕುರಿತು ಅಧಿಕೃತ ಆದೇಶ ಹೊರಡಿಸದಿದ್ದರೆ ರಾಜ್ಯಾದ್ಯಂತ ಯೋಜನಾ ಕಾರ್ಯಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

Share this