ಸಪ್ತಸಾಗರ ವಾರ್ತೆ,ವಿಜಯಪುರ, ಅ. 17:
ಮಳೆಯ ಕೊರತೆಯಿಂದ ಬೆಳೆ ನಷ್ಟ ಅನುಭವಿಸಿರುವ ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯದ ಬರಪೀಡಿತ ಪ್ರದೇಶಗಳ ರೈತರಿಗೆ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು ಎಂದು ಭೀಮ್ ರಾಜ್ಯ ದಲಿತ ಸೇವಾ ಸಮಿತಿ (ರಿ) ಆಗ್ರಹಿಸಿದೆ.
ಸಮಿತಿಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ನೀಲಾಂಬಿಕಾ ಕಟ್ಟಿಮನಿ ಹಾಗೂ ರಾಜ್ಯ ಅಲ್ಪಸಂಖ್ಯಾತರ ಮಹಿಳಾ ಘಟಕದ ಅಧ್ಯಕ್ಷೆ ಸಲ್ಮಾ ಮೈರಾಗೋಳ ನೇತೃತ್ವದಲ್ಲಿ ಈ ಬೇಡಿಕೆ ಮುಂದಿಡಲಾಗಿದೆ.
ಬೀಜ, ಗೊಬ್ಬರ, ಔಷಧಿ ಹಾಗೂ ಕೃಷಿ ಕಾರ್ಮಿಕರ ವೆಚ್ಚ ಹೆಚ್ಚಿರುವ ಸಂದರ್ಭದಲ್ಲಿ ಮಳೆಯ ಕೊರತೆಯಿಂದ ಬೆಳೆ ನಷ್ಟವಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೂಡಿಕೆ ಮಾಡಿದ ಹಣವೂ ಮರಳದೆ, ಮುಂದಿನ ಕೃಷಿ ಚಟುವಟಿಕೆಗಳಿಗೆ ಬಂಡವಾಳ ಹೊಂದಿಸುವುದು ಕಷ್ಟವಾಗಿದೆ ಎಂದು ಸಮಿತಿ ತಿಳಿಸಿದೆ.
ಬೆಳೆ ನಷ್ಟದ ಪಾರದರ್ಶಕ ಸಮೀಕ್ಷೆ ನಡೆಸಿ ಅರ್ಹ ರೈತರನ್ನು ಗುರುತಿಸಬೇಕು. ಪರಿಹಾರವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಬೇಕು. ಸಣ್ಣ ಮತ್ತು ಅತಿಸಣ್ಣ ರೈತರಿಗೆ ಆದ್ಯತೆ ನೀಡಿ, ಈಗಾಗಲೇ ಘೋಷಿಸಿರುವ ಪರಿಹಾರದ ಜೊತೆಗೆ ಹೆಚ್ಚುವರಿ ನೆರವು ಒದಗಿಸಬೇಕು. ರೈತರ ಸಾಲದ ಹೊರೆ ತಗ್ಗಿಸಲು ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದೆ.
ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ
ರೈತರ ಸಂಕಷ್ಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಿ, ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡುವ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳಬೇಕು. ಈ ಸಂಬಂಧ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಬೇಡಿಕೆ ಈಡೇರದಿದ್ದರೆ ರೈತರ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕ ಹೋರಾಟ ಮುಂದುವರಿಸಲಾಗುವುದು ಎಂದು ನೀಲಾಂಬಿಕಾ ಕಟ್ಟಿಮನಿ ಹಾಗೂ ಸಲ್ಮಾ ಮೈರಾಗೋಳ ತಿಳಿಸಿದ್ದಾರೆ.
ಸಮಿತಿಯ ರಾಜ್ಯಾಧ್ಯಕ್ಷ ಅಪ್ಪುರಾಜ್ ನಿಮಾದಾರ, ರಾಜ್ಯ ಉಪಾಧ್ಯಕ್ಷರಾದ ವಿಜಯಕುಮಾರ ನಿಮಾದಾರ ಮತ್ತು ಮಲ್ಲಿಕಾರ್ಜುನ ಬೂತನಾಳ, ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಸುಶೀಲಾ ಮೀಣಜಗಿ, ಮಾಧ್ಯಮ ಘಟಕದ ಅಧ್ಯಕ್ಷ ದೌಲಪ್ಪ ಮನಗೂಳಿ, ಅಂಗವಿಕಲ ಘಟಕದ ಅಧ್ಯಕ್ಷ ಅರುಣಕುಮಾರ ಗುಜ್ಜರ, ವಿಜಯಪುರ ಜಿಲ್ಲಾಧ್ಯಕ್ಷ ನಾಗರಾಜ ಕಬಾಡೆ ಸೇರಿದಂತೆ ರಾಜ್ಯ, ಜಿಲ್ಲಾ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.


