ಆರೋಗ್ಯ ಕ್ಷೇತ್ರಕ್ಕೆ ಎಕ್ಸಲೆಂಟ್ ನರ್ಸಿಂಗ್ ಕಾಲೇಜಿನ ಕೊಡುಗೆ ಅನನ್ಯ: ಮಲ್ಲನಗೌಡ ಬಿರಾದಾರ

ಸಪ್ತಸಾಗರ ವಾರ್ತೆ,ವಿಜಯಪುರ, ಅ. 17: ಆರೋಗ್ಯ ಕ್ಷೇತ್ರದ ಬೆಳವಣಿಗೆಯಲ್ಲಿ ನರ್ಸಿಂಗ್ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದ್ದು, ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ನುರಿತ ಶುಶ್ರೂಷಕರನ್ನು ರೂಪಿಸುತ್ತಿರುವ ಎಕ್ಸಲೆಂಟ್ ನರ್ಸಿಂಗ್ ಕಾಲೇಜಿನ ಕೊಡುಗೆ ಅನನ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಲ್ಲನಗೌಡ ಬಿರಾದಾರ ಹೇಳಿದರು.
ನಗರದಲ್ಲಿ ಮಾತೋಶ್ರೀ ಗೌರಮ್ಮ ಅಪ್ಪಾಸಾಹೇಬ ಬಬಲೇಶ್ವರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಎಕ್ಸಲೆಂಟ್ ಕಾಲೇಜ್ ಆಫ್ ನರ್ಸಿಂಗ್‌ನ ನಾಲ್ಕನೇ ಬ್ಯಾಚ್ ವಿದ್ಯಾರ್ಥಿಗಳ ದೀಪದಾನ ಹಾಗೂ ಪ್ರತಿಜ್ಞಾವಿಧಿ ಬೋಧನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯುವ ನಾಯಕ ಸಂಗಮೇಶ ಬಬಲೇಶ್ವರ ಅವರು ತಮ್ಮ ತಾಯಿಯ ಸ್ಮರಣಾರ್ಥ ಸ್ಥಾಪಿಸಿರುವ ಈ ಕಾಲೇಜಿನಿಂದ ತಾಯಿಯ ಹೃದಯ ಹೊಂದಿರುವ ನರ್ಸ್‌ಗಳು ಪ್ರತಿ ವರ್ಷ ಹೊರಬರಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಹಾಗೂ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ವೈದ್ಯರು ಮತ್ತು ನರ್ಸ್‌ಗಳು ತಾಯಿಯ ಸ್ಥಾನದಲ್ಲಿ ನಿಂತು ರೋಗಿಗಳ ಆರೈಕೆ ಮಾಡುತ್ತಾರೆ. ವಿದ್ಯಾರ್ಥಿಗಳು ರೋಗಿಗಳಲ್ಲಿ ತಮ್ಮ ತಂದೆ-ತಾಯಿಯನ್ನು ಕಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು. ತಾಯಿಯ ಸ್ಮರಣಾರ್ಥ ಆರಂಭಿಸಿರುವ ನರ್ಸಿಂಗ್ ಕಾಲೇಜಿನ ಉದ್ದೇಶ ಈಡೇರಿದಂತಾಗಲು ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿ ಜನನಿ ಆಸ್ಪತ್ರೆಯ ಮುಖ್ಯಸ್ಥ ಡಾ. ಹಂಪನಗೌಡ ಪಾಟೀಲ ಮಾತನಾಡಿ, ನರ್ಸಿಂಗ್ ವೃತ್ತಿ ಅತ್ಯಂತ ಪವಿತ್ರವಾದದ್ದು. ಸೇವಾ ಮನೋಭಾವದಿಂದ ರೋಗಿಗಳ ಆರೈಕೆ ಮಾಡುವುದಕ್ಕಿಂತ ಶ್ರೇಷ್ಠವಾದ ಕಾರ್ಯ ಮತ್ತೊಂದಿಲ್ಲ ಎಂದರು.
ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಹನುಮಂತಪ್ಪ ಹತ್ತರಿಕಿಹಾಳ ಮಾತನಾಡಿ, ವಿದ್ಯಾರ್ಥಿಗಳು ವೃತ್ತಿಯಲ್ಲಿ ಶಿಸ್ತು ಮತ್ತು ಪ್ರಾಮಾಣಿಕತೆಯನ್ನು ಅಳವಡಿಸಿಕೊಳ್ಳಬೇಕು. ಎಕ್ಸಲೆಂಟ್ ನರ್ಸಿಂಗ್ ಕಾಲೇಜು ಜಿಲ್ಲಾ ಆಸ್ಪತ್ರೆಯೊಂದಿಗೆ ಸಂಯೋಜನೆ ಹೊಂದಿರುವುದರಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ಪ್ರಾಯೋಗಿಕ ತರಬೇತಿ ಪಡೆಯಲು ಅವಕಾಶವಿದೆ ಎಂದರು.
ಕಾರ್ಯಕ್ರಮದಲ್ಲಿ ಉದ್ಯಮಿ ಶಾಂತೇಶ ಕಳಸಗೊಂಡ ಅವರನ್ನು ಸನ್ಮಾನಿಸಲಾಯಿತು.
ವಿವಿಧ ಸಾಧಕ ವಿದ್ಯಾರ್ಥಿಗಳನ್ನೂ ಗೌರವಿಸಲಾಯಿತು.
ಸಂಸ್ಥೆಯ ನಿರ್ದೇಶಕ ಪ್ರದೀಪ ಲಿಂಗದಳ್ಳಿ, ಪ್ರಾಚಾರ್ಯೆ ಶ್ವೇತಾ ಬಿರಾದಾರ, ಎಸ್.ಎ. ಮೋಮಿನ್, ಜಯಶ್ರೀ, ಅಮಿತ್, ಸಂಯೋಜಕರಾದ ರಾಜಶೇಖರ ತಿಡಗುಂದಿ, ಶರಣಗೌಡ, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.

Share this