ಸಪ್ತಸಾಗರ ವಾರ್ತೆ,ಕಂಬಾಗಿ, ಅ.17: ಗ್ರಾಮೀಣ ಜನರಲ್ಲಿ ಆರ್ಥಿಕ ಸಾಕ್ಷರತೆ ಹೆಚ್ಚಿಸುವುದು ಹಾಗೂ ಬ್ಯಾಂಕಿಂಗ್, ವಿಮೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕಂಬಾಗಿ ಗ್ರಾಮದಲ್ಲಿ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸಿದ್ದಯ್ಯ ಬಿ. ಅವರು ವಿವಿಧ ಬ್ಯಾಂಕಿಂಗ್, ವಿಮಾ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಮಾಹಿತಿ ನೀಡಿ, ಅರ್ಹರು ಸರ್ಕಾರಿ ಯೋಜನೆಗಳ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಮುಕುಂದ ಝಳಕಿ ಅವರು ಸ್ವಯಂ ಉದ್ಯೋಗ ಹಾಗೂ ಸಂಸ್ಥೆಯಲ್ಲಿ ನೀಡಲಾಗುವ ವಿವಿಧ ಕೌಶಲಾಧಾರಿತ ತರಬೇತಿಗಳ ಕುರಿತು ಮಾಹಿತಿ ನೀಡಿ, ಯುವಜನರು ತರಬೇತಿಯ ಸದುಪಯೋಗ ಪಡೆದು ಸ್ವಯಂ ಉದ್ಯೋಗದ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದರು.
ಆರ್ಥಿಕ ಸಾಕ್ಷರತಾ ಸಲಹೆಗಾರ ಈರೇಶ ಡಂಗಿ ಅವರು ಸಾಮಾಜಿಕ ಭದ್ರತಾ ಯೋಜನೆಗಳ ಮಹತ್ವ ಮತ್ತು ಪ್ರಯೋಜನಗಳನ್ನು ವಿವರಿಸಿದರು. ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ಪ್ರದೀಪ್ ಕುಮಾರ್ ಅವರು ರೈತರಿಗೆ ಲಭ್ಯವಿರುವ ವಿವಿಧ ಸಾಲ ಸೌಲಭ್ಯಗಳು ಹಾಗೂ ಬ್ಯಾಂಕಿಂಗ್ ಸೇವೆಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್ ಅಧಿಕಾರಿ ನಾಗಾರ್ಜುನ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯಡಿ ₹2 ಲಕ್ಷ ವಿಮಾ ಮೊತ್ತವನ್ನು ಫಲಾನುಭವಿಗೆ ವಿತರಿಸಲಾಯಿತು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರು ತಿಳಿಸಿದ್ದಾರೆ.
ಆರ್ಥಿಕ ಸಾಕ್ಷರತೆ ಪ್ರತಿಯೊಬ್ಬರಿಗೂ ಅಗತ್ಯ: ಸರ್ಕಾರಿ ಯೋಜನೆಗಳ ಸದ್ಬಳಕೆಗೆ ಕರೆ


