ಕಬ್ಬು ಬೆಳೆಗಾರರ ಸಮಸ್ಯೆ ತೀವ್ರ ಸ್ವರೂಪ: ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಪಂಚಪ್ಪ ಕಲಬುರಗಿ ಆಗ್ರಹ

ಹಿಂಗಾರು ಬೆಳೆಗಳಿಗೆ ನೀರು ನಿರಾಕರಿಸುವ ಐಸಿಸಿ ನಿರ್ಣಯ ಹಿಂಪಡೆಯಲು ಒತ್ತಾಯ

ಸಪ್ತಸಾಗರ ವಾರ್ತೆ, ವಿಜಯಪುರ, ಅ. 17:
ಕಬ್ಬು ಬೆಳೆಗಾರರ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ರೈತರ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ರೈತ ಮುಖಂಡ ಪಂಚಪ್ಪ ಕಲಬುರಗಿ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂಬತ್ತು ವರ್ಷಗಳಿಂದ ಕಬ್ಬಿನ ಕನಿಷ್ಠ ಬೆಂಬಲ ಬೆಲೆ ಪರಿಷ್ಕರಣೆಯಾಗಿಲ್ಲ. ಇದೇ ಅವಧಿಯಲ್ಲಿ ಕೃಷಿ ಕಾರ್ಮಿಕರ ಕೂಲಿ, ಗೊಬ್ಬರ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸೇರಿದಂತೆ ಕಬ್ಬು ಉತ್ಪಾದನಾ ವೆಚ್ಚ ಮೂರರಿಂದ ನಾಲ್ಕು ಪಟ್ಟು ಹೆಚ್ಚಾಗಿದೆ. ಆದರೆ, ಅದಕ್ಕೆ ಅನುಗುಣವಾಗಿ ಬೆಲೆ ಪರಿಷ್ಕರಣೆ ಮಾಡದಿರುವುದು ರೈತರಿಗೆ ಅನ್ಯಾಯವಾಗಿದೆ. ಕೂಡಲೇ ಪ್ರತಿ ಟನ್ ಕಬ್ಬಿಗೆ ₹60ರಷ್ಟು ಬೆಲೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರದ ಕೆಲವು ನೀತಿ ಬದಲಾವಣೆಗಳು ಕಬ್ಬು ಬೆಳೆಗಾರರಿಗೆ ಮಾರಕವಾಗಿವೆ. ಈ ಹಿಂದೆ ಶೇ.9.5ರಷ್ಟಿದ್ದ ಇಳುವರಿ ಮಾನದಂಡವನ್ನು ಶೇ.10.5ಕ್ಕೆ ಹೆಚ್ಚಿಸಿರುವುದರಿಂದ ರೈತರಿಗೆ ಪ್ರತಿ ಟನ್ ಕಬ್ಬಿಗೆ ಸುಮಾರು ₹200 ನಷ್ಟವಾಗುತ್ತಿದೆ. ಅಲ್ಲದೆ, ಕಟಾವು ಮತ್ತು ಸಾಗಣೆ ವೆಚ್ಚದ ಹೊರೆಯನ್ನೂ ರೈತರ ಮೇಲೆ ಹಾಕಲಾಗುತ್ತಿದೆ ಎಂದು ದೂರಿದರು.
ಕಬ್ಬು ಬೆಳೆಗಾರರ ಹೋರಾಟ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ ಉತ್ತರ ಪ್ರದೇಶ ಸೇರಿದಂತೆ ಇತರ ರಾಜ್ಯಗಳಿಗೂ ವಿಸ್ತರಿಸುವ ಸಾಧ್ಯತೆಯಿದೆ. ಹೀಗಾಗಿ ಪ್ರಧಾನಿ ಮೋದಿ ಅವರು ತಕ್ಷಣ ಮಧ್ಯಸ್ಥಿಕೆ ವಹಿಸಬೇಕು. ಪೆಟ್ರೋಲ್ ಮತ್ತು ಡೀಸೆಲ್‌ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಶೇ.50ಕ್ಕೆ ಹೆಚ್ಚಿಸುವ ಮೂಲಕ ವಿದೇಶಿ ಇಂಧನದ ಮೇಲಿನ ಅವಲಂಬನೆ ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.
ಸಕ್ಕರೆ ಕಾರ್ಖಾನೆಗಳು ಸಕ್ಕರೆ ಹೊರತಾಗಿ ಇತರ ಉತ್ಪನ್ನಗಳನ್ನೂ ತಯಾರಿಸುತ್ತವೆ. ಅವುಗಳಿಂದ ಕಾರ್ಖಾನೆಗಳಿಗೆ ಆದಾಯ ಬರುತ್ತಿದ್ದು, ಸರ್ಕಾರವೂ ತೆರಿಗೆ ವಿಧಿಸುತ್ತದೆ. ಹಾಗಾದರೆ ಆ ಆದಾಯದಲ್ಲಿ ರೈತರಿಗೆ ಪಾಲು ನೀಡಬಾರದೇ ಎಂದು ಪ್ರಶ್ನಿಸಿದರು. ಗ್ರಾಹಕರಿಗೆ ಕಡಿಮೆ ದರದಲ್ಲಿ ಸಕ್ಕರೆ ಪೂರೈಸುವುದರ ಜತೆಗೆ ವಾಣಿಜ್ಯ ಉದ್ದೇಶಕ್ಕೆ ಬಳಸುವ ಸಕ್ಕರೆಯ ದರವನ್ನೂ ಪರಿಷ್ಕರಿಸಬೇಕು ಎಂಬುದು ರೈತರ ನ್ಯಾಯಸಮ್ಮತ ಬೇಡಿಕೆಯಾಗಿದೆ ಎಂದರು.

ಹಿಂಗಾರು ಬೆಳೆಗಳಿಗೆ ನೀರು ನಿರಾಕರಿಸುವುದು ಯಾವ ನ್ಯಾಯ?
ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ನೀರಿನ ಲಭ್ಯತೆ ಇದ್ದರೂ ಹಿಂಗಾರು ಹಂಗಾಮಿನಲ್ಲಿ ಹೊಲಗಳಿಗೆ ನೀರು ಹರಿಸುವುದಿಲ್ಲ ಎಂದು ನೀರಾವರಿ ಸಲಹಾ ಸಮಿತಿ (ಐಸಿಸಿ) ನಿರ್ಣಯ ಕೈಗೊಂಡಿರುವುದು ಯಾವ ನ್ಯಾಯ ಎಂದು ಪಂಚಪ್ಪ ಕಲಬುರಗಿ ಪ್ರಶ್ನಿಸಿದರು.
ಹಿಂಗಾರು ಹಂಗಾಮಿನಲ್ಲಿ ಕಬ್ಬು ಸೇರಿದಂತೆ ದೀರ್ಘಾವಧಿ ಬೆಳೆಗಳಿಗೆ ನೀರು ಕೇಳುತ್ತಿಲ್ಲ. ರೈತರು ಮೂರು ಹೊತ್ತಿನ ಊಟಕ್ಕೆ ಅವಲಂಬಿಸಿರುವ ಜೋಳ, ಗೋಧಿಯಂತಹ ಅಲ್ಪಾವಧಿ ಬೆಳೆಗಳಿಗೆ ಮೂರು ತಿಂಗಳ ಕಾಲ ನೀರು ಹರಿಸುವಂತೆ ಕೇಳುತ್ತಿದ್ದೇವೆ. ಆದರೂ ನೀರು ನಿರಾಕರಿಸಿರುವುದು ಅನ್ಯಾಯದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತೆಲಂಗಾಣದಲ್ಲಿ ತಮ್ಮ ಪಕ್ಷದ ಸರ್ಕಾರವಿದೆ ಎಂಬ ಕಾರಣಕ್ಕೆ ಅಲ್ಲಿಗೆ ನೀರು ಹರಿಸಲು ಕರ್ನಾಟಕದ ರೈತರಿಗೆ ಅನ್ಯಾಯ ಮಾಡುತ್ತಿದ್ದೀರಾ? ನಮ್ಮ ರೈತರು ಬೇಕೋ ಅಥವಾ ನೆರೆಯ ರಾಜ್ಯದ ನಿಮ್ಮ ಪಕ್ಷದ ಕಾರ್ಯಕರ್ತರು ಬೇಕೋ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಖಾರವಾಗಿ ಪ್ರಶ್ನಿಸಿದರು.
ಆಲಮಟ್ಟಿ ಜಲಾಶಯದಲ್ಲಿ 100 ಟಿಎಂಸಿ ಹಾಗೂ ನಾರಾಯಣಪುರ ಜಲಾಶಯದಲ್ಲಿ 10 ಟಿಎಂಸಿ ನೀರು ಲಭ್ಯವಿದೆ. ಈ ನೀರಿನಿಂದ ಮೂರು ತಿಂಗಳ ಕಾಲ ಜೋಳ, ಗೋಧಿಯಂತಹ ಬೆಳೆಗಳನ್ನು ಬೆಳೆಯಲು ಅವಕಾಶ ಕಲ್ಪಿಸಬಹುದು. ನೀರು ಹರಿಸದಿದ್ದರೆ ಮೇವು ಬೆಳೆಯಲೂ ಸಾಧ್ಯವಾಗದೆ, ಜಾನುವಾರುಗಳನ್ನು ಕಸಾಯಿಖಾನೆಗೆ ಕಳುಹಿಸಬೇಕಾದ ದುಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.
ಹೀಗಾಗಿ ಹಿಂಗಾರು ಹಂಗಾಮಿನಲ್ಲಿ ನೀರು ಹರಿಸದಿರುವ ನಿರ್ಣಯವನ್ನು ತಕ್ಷಣ ಹಿಂಪಡೆದು ರೈತರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜು ಹಿಪ್ಪರಗಿ, ಎಸ್.ಎಸ್. ಖಾದ್ರಿ ಇನಾಮದಾರ, ಎಸ್.ಬಿ. ಪಾಟೀಲ, ಸಂಜೀವ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share this