ಸಪ್ತಸಾಗರ ವಾರ್ತೆ,ವಿಜಯಪುರ, ಅ. 18:
ಕೆನಡಾದಲ್ಲಿ ಇತ್ತೀಚೆಗೆ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದ ಪವರ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಬಬಲೇಶ್ವರ ತಾಲೂಕಿನ ತಿಗಣಿ ಬಿದರಿ ಗ್ರಾಮದ ಕ್ರೀಡಾಪಟು ಸಚೀನ ತುಕಾರಾಮ ಸಾಳುಂಕೆ ಅವರನ್ನು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಭಾನುವಾರ ನಗರದಲ್ಲಿ ಆತ್ಮೀಯವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ, ಸಚೀನ ಸಾಳುಂಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ವಿಜಯಪುರ ಜಿಲ್ಲೆ ಹಾಗೂ ಬಬಲೇಶ್ವರ ತಾಲೂಕಿನ ಕೀರ್ತಿ ಹೆಚ್ಚಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಸಚೀನ ಅವರು ಚಿಕ್ಕಂದಿನಿಂದಲೇ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾರೆ. ಅವರ ತಂದೆ ಹಾಗೂ ಸಹೋದರ ಇಂದಿಗೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಗ್ರಾಮೀಣ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಶ್ಲಾಘನೀಯವಾಗಿದ್ದು, ಮುಂದಿನ ದಿನಗಳಲ್ಲಿ ಒಲಿಂಪಿಕ್ಸ್ನಲ್ಲೂ ಭಾಗವಹಿಸಿ ಚಿನ್ನದ ಪದಕ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು.
ಸಚಿನ ಅವರು ತುಮಕೂರಿನ ಸಿದ್ದಗಂಗಾ ಮಠದ ಉಚಿತ ಪ್ರಸಾದ ನಿಲಯದಲ್ಲಿ ಉಳಿದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದು, ಬಳಿಕ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದಿದ್ದಾರೆ. ಕಳೆದ ಐದು ವರ್ಷಗಳಿಂದ ಬೆಂಗಳೂರು ಸೇರಿದಂತೆ ವಿವಿಧೆಡೆ ಪವರ್ಲಿಫ್ಟಿಂಗ್ ತರಬೇತಿ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಟೊಯೋಟಾ ಹಾಗೂ ಜಿಂದಾಲ್ನಂತಹ ಖಾಸಗಿ ಕಂಪನಿಗಳು ಕ್ರೀಡಾಪಟುಗಳಿಗೆ ಉದ್ಯೋಗದೊಂದಿಗೆ ತರಬೇತಿಗೂ ಉತ್ತೇಜನ ನೀಡುತ್ತಿವೆ. ಇದರ ಸದುಪಯೋಗ ಪಡೆದುಕೊಂಡು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಬೇಕು ಎಂದು ಸಚೀನ ಅವರಿಗೆ ಸಚಿವರು ಸಲಹೆ ನೀಡಿ ಶುಭ ಹಾರೈಸಿದರು.
105 ಕೆ.ಜಿ. ಪುರುಷರ ವಿಭಾಗದಲ್ಲಿ ಸಾಧನೆ: ಕಾಮನ್ವೆಲ್ತ್ ಕ್ರೀಡಾಕೂಟದ 105 ಕೆ.ಜಿ. ಪುರುಷರ ವಿಭಾಗದಲ್ಲಿ ಸಚೀನ ಸಾಳುಂಕೆ ಸ್ಕ್ವಾಟ್ನಲ್ಲಿ 350 ಕೆ.ಜಿ., ಬೆಂಚ್ ಪ್ರೆಸ್ನಲ್ಲಿ 180 ಕೆ.ಜಿ. ಹಾಗೂ ಡೆಡ್ಲಿಫ್ಟ್ನಲ್ಲಿ 270 ಕೆ.ಜಿ. ತೂಕ ಎತ್ತಿ ಒಟ್ಟು 800 ಕೆ.ಜಿ. ಭಾರ ಎತ್ತುವ ಮೂಲಕ ದೇಶಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ.
ಕಾಮನ್ವೆಲ್ತ್ನಲ್ಲಿ ಬೆಳ್ಳಿ ಗೆದ್ದ ಸಚಿನ ಸಾಳುಂಕೆಗೆ ಸನ್ಮಾನ


