ಅಸ್ಮಿತಾ ಖೇಲೋ ಇಂಡಿಯಾ ರಾಜ್ಯಮಟ್ಟದ ಮಹಿಳಾ ಟ್ರ್ಯಾಕ್ ಸೈಕ್ಲಿಂಗ್ ಟೂರ್ನಿಗೆ ತೆರೆ

ಪದಕ ವಿಜೇತ ಸೈಕ್ಲಿಸ್ಟ್‌ಗಳಿಗೆ ಪಾರಿತೋಷಕ, ನಗದು ಬಹುಮಾನ ವಿತರಣೆ

ಸಪ್ತಸಾಗರ ವಾರ್ತೆ, ವಿಜಯಪುರ, ಅ. 18:

ನಗರದ ಹೊರವಲಯದ ಭೂತನಾಳ ಕೆರೆ ಬಳಿಯ ವೆಲೋಡ್ರೋಮ್‌ನಲ್ಲಿ ಎರಡು ದಿನಗಳ ಕಾಲ ನಡೆದ ಅಸ್ಮಿತಾ ಖೇಲೋ ಇಂಡಿಯಾ ರಾಜ್ಯಮಟ್ಟದ ಮಹಿಳಾ ಟ್ರ್ಯಾಕ್ ಸೈಕ್ಲಿಂಗ್ ಟೂರ್ನಿಗೆ ಭಾನುವಾರ ವಿದ್ಯುಕ್ತ ತೆರೆ ಬಿದ್ದಿತು. ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಪದಕ ಗೆದ್ದ ಸೈಕ್ಲಿಸ್ಟ್‌ಗಳಿಗೆ ಗಣ್ಯರು ಪದಕ, ಪಾರಿತೋಷಕ ಹಾಗೂ ನಗದು ಬಹುಮಾನ ವಿತರಿಸಿ ಪ್ರೋತ್ಸಾಹಿಸಿದರು.
ಕೇಂದ್ರ ಸರಕಾರದ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್), ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಶನ್, ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಶನ್, ಜಿಲ್ಲಾಡಳಿತ, ವಿಜಯಪುರ ಸೈಕ್ಲಿಂಗ್ ಗ್ರೂಪ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಟೂರ್ನಿ ಆಯೋಜಿಸಲಾಗಿತ್ತು.
ಆದರ್ಶನಗರ ಅಪರಾಧ ವಿಭಾಗದ ಪೊಲೀಸ್ ಉಪನಿರೀಕ್ಷಕಿ ಪ್ರೇಮಾ ಕುಚಬಾಳ ಪದಕ ವಿತರಿಸಿ ಮಾತನಾಡಿ, ತಾವು ವಿದ್ಯಾರ್ಥಿ ದೆಸೆಯಲ್ಲಿ ಅಥ್ಲೆಟಿಕ್ಸ್‌ನಲ್ಲಿ ತೊಡಗಿಸಿಕೊಂಡಿದ್ದು, ರಾಜ್ಯಮಟ್ಟದ ಪದಕವನ್ನೂ ಗಳಿಸಿದ್ದಾಗಿ ತಿಳಿಸಿದರು. ಕ್ರೀಡಾ ಕೋಟಾದಡಿ ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್ ಆಗಿ ನೇಮಕಗೊಂಡು, ಬಳಿಕ ಪದೋನ್ನತಿ ಪಡೆದು ಪಿಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದರು.
ಕ್ರೀಡಾಪಟುಗಳು ಸಕ್ರಿಯವಾಗಿ ಅಭ್ಯಾಸ ನಡೆಸಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಕರ್ನಾಟಕದ ಕೀರ್ತಿ ಹೆಚ್ಚಿಸಬೇಕು. ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುವುದರೊಂದಿಗೆ ಕ್ರೀಡಾ ಕೋಟಾದಡಿ ಸರಕಾರಿ ಉದ್ಯೋಗ ಪಡೆಯುವ ಅವಕಾಶವನ್ನೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಪಿಸಿಪಿ ಸದ್ದಾ ರೋಕಡೆ ಮಾತನಾಡಿ, ಕರ್ನಾಟಕದಲ್ಲಿ ಸೈಕ್ಲಿಂಗ್ ಸ್ಪರ್ಧೆಗಳನ್ನು ಉತ್ತಮವಾಗಿ ಆಯೋಜಿಸಲಾಗುತ್ತಿದೆ. ವಿಜಯಪುರದಲ್ಲಿ ಎರಡು ದಿನ ನಡೆದ ರಾಜ್ಯಮಟ್ಟದ ಮಹಿಳಾ ಟ್ರ್ಯಾಕ್ ಸೈಕ್ಲಿಂಗ್ ಟೂರ್ನಿಯ ವ್ಯವಸ್ಥೆಯೂ ಅಚ್ಚುಕಟ್ಟಾಗಿತ್ತು. ಮುಂದಿನ ದಿನಗಳಲ್ಲಿ ವಿಜಯಪುರದಲ್ಲಿ ರಾಷ್ಟ್ರೀಯಮಟ್ಟದ ಸೈಕ್ಲಿಂಗ್ ಸ್ಪರ್ಧೆ ಆಯೋಜಿಸಿದರೆ ಫೆಡರೇಶನ್‌ನಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ರಾಜು ಬಿರಾದಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ವಿವಿಧ ಸ್ಪರ್ಧೆಗಳಲ್ಲಿ ಸ್ಥಾನ ಪಡೆದ ಸೈಕ್ಲಿಸ್ಟ್‌ಗಳಿಗೆ ಪದಕ ಹಾಗೂ ನಗದು ಬಹುಮಾನ ವಿತರಿಸಲಾಯಿತು.

ರಾಜು ಬಿರಾದಾರ ಅವರಿಗೆ ಸನ್ಮಾನ

ಕರ್ನಾಟಕ ಒಲಿಂಪಿಕ್ ಸಂಸ್ಥೆಯ (ಕೆಒಎ) ನೀತಿಶಾಸ್ತ್ರ ಸಮಿತಿಗೆ ನೂತನ ಸದಸ್ಯರಾಗಿ ನಾಮನಿರ್ದೇಶನಗೊಂಡ ಕರ್ನಾಟಕ ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ರಾಜು ಬಿರಾದಾರ ಅವರನ್ನು ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಶನ್ ಪದಾಧಿಕಾರಿಗಳು ಸನ್ಮಾನಿಸಿದರು.
ಸೈಕ್ಲಿಂಗ್ ಹಾಸ್ಟೆಲ್‌ನ ತರಬೇತುದಾರರಾದ ಅಲ್ಕಾ ಪಡತಾರೆ, ಬಿ.ಜಿ. ಚಿಮ್ಮಲಗಿ, ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಶನ್ ಪದಾಧಿಕಾರಿಗಳಾದ ಸಂಜೀವ ಪಡತರೆ, ನಿಜಪ್ಪ ಎಂಟೆತ್ತು, ಲಕ್ಷ್ಮಣ ಕುರಣಿ, ಸಂತೋಷ ಕತಕನಹಳ್ಳಿ, ಅಶೋಕ ಭೂತನಾಳ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಜಿಲ್ಲಾ ಸೈಕ್ಲಿಂಗ್ ಸಂಸ್ಥೆಯ ಉಪಾಧ್ಯಕ್ಷ ಆರ್.ವೈ. ಶೀಲವಂತ ನಿರೂಪಿಸಿದರು. ಶ್ರೀಕಾಂತ ಮಠ ವಂದಿಸಿದರು.

18 ವರ್ಷದೊಳಗಿನ ಬಾಲಕಿಯರ ಸ್ಪರ್ಧೆಗಳ ಫಲಿತಾಂಶ

ಟೈಮ್ ಟ್ರಯಲ್ (ಟಿಟಿ):

  1. ಜ್ಯೋತಿ ರಾಥೋಡ್
  2. ಸಂಗವ್ವ ಬನ್ಸೋಡೆ
  3. ಸೌಂದರ್ಯ ಅಂತಾಪುರ

ಸ್ಕ್ರ್ಯಾಚ್ ರೇಸ್:

  1. ಸಂಗವ್ವ ಬನ್ಸೋಡೆ
  2. ಕೌಶಲ್ಯ ರಾಂಗೊಂಡ್
  3. ಸೌಂದರ್ಯ ಅಂತಾಪುರ

ಸ್ಪ್ರಿಂಟ್:

  1. ಜ್ಯೋತಿ ರಾಥೋಡ್
  2. ವರ್ಷಾ ಸುನಿಲ್ ಚವ್ಹಾಣ್
  3. ಸೌಂದರ್ಯ ಅಂತಾಪುರ

ಕೀರಿನ್:

  1. ಜ್ಯೋತಿ ರಾಥೋಡ್
  2. ಸೌಂದರ್ಯ ಅಂತಾಪುರ
  3. ಸಂಗವ್ವ ಬನ್ಸೋಡೆ

ಇಂಡಿವಿಜುವಲ್ ಪರ್ಸ್ಯೂಟ್ (ಐಪಿ):

  1. ಜ್ಯೋತಿ ರಾಥೋಡ್
  2. ಭಾರತಿ ಬಜಂತ್ರಿ
  3. ಕೌಶಲ್ಯ ರಾಂಗೊಂಡ್
Share this