ಸಪ್ತಸಾಗರ ವಾರ್ತೆ, ವಿಜಯಪುರ, ಅ. 18:
ಕೃಷ್ಣೆ ಮತ್ತು ಕಾವೇರಿ ನದಿಗಳು ಕರ್ನಾಟಕದ ಎರಡು ಕಣ್ಣುಗಳಿದ್ದಂತೆ. ಈ ಎರಡೂ ನದಿಗಳ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ. ಕೃಷ್ಣಾ ಆರತಿ ಕಾರ್ಯಕ್ರಮದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸುವುದಾಗಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ವಿಜಯಪುರ ನಗರದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಈ ಬಾರಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ರದ್ದಾಗಿರುವುದು ಹಾಗೂ ಕಾವೇರಿ ಆರತಿ ಕಾರ್ಯಕ್ರಮದ ಕುರಿತು ಪ್ರತಿಕ್ರಿಯಿಸಿದರು. ಕೃಷ್ಣೆ ವಿಚಾರದಲ್ಲಿ ಸರ್ಕಾರ ಯಾವುದೇ ಅಸಡ್ಡೆ ತೋರಿಲ್ಲ ಎಂದು ಸ್ಪಷ್ಟಪಡಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಮುಳುಗಡೆಯಾಗುವ ರೈತರ ಭೂಮಿಗೆ ತಮ್ಮ ಸರ್ಕಾರ ದರ ನಿಗದಿಪಡಿಸಿದೆ. ಒಣ ಬೇಸಾಯದ ಭೂಮಿಗೆ ಎಕರೆಗೆ ₹30 ಲಕ್ಷ ಹಾಗೂ ನೀರಾವರಿ ಭೂಮಿಗೆ ಎಕರೆಗೆ ₹40 ಲಕ್ಷ ನಿಗದಿಪಡಿಸಲಾಗಿದೆ ಎಂದು ಹೇಳಿದರು.
ತೆಲಂಗಾಣಕ್ಕೆ ಕುಡಿಯುವ ನೀರು
ಯಾದಗಿರಿಯ ಬಸವಸಾಗರ ಜಲಾಶಯದಿಂದ ತೆಲಂಗಾಣಕ್ಕೆ 2 ಟಿಎಂಸಿ ನೀರು ಬಿಡುಗಡೆ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರು ನೀಡಬೇಕಾಗುತ್ತದೆ ಎಂದರು.
ನಾವು ಹಲವು ಬಾರಿ ನೆರೆಯ ಮಹಾರಾಷ್ಟ್ರದಿಂದ ಕುಡಿಯುವ ನೀರು ಪಡೆದಿದ್ದೇವೆ. ನಾವೆಲ್ಲರೂ ಭಾರತ ದೇಶದವರಾಗಿದ್ದು, ನಮ್ಮಲ್ಲಿ ಕುಡಿಯುವ ನೀರಿನ ಕೊರತೆಯಾದಾಗ ನೆರೆಯವರನ್ನು ಕೇಳುತ್ತೇವೆ. ಅದೇ ರೀತಿ ಬೇರೆಯವರಿಗೆ ನೀರಿನ ಕೊರತೆಯಾದಾಗ ನಾವೂ ನೆರವಾಗಬೇಕಾಗುತ್ತದೆ ಎಂದು ಹೇಳಿದರು.
ರೈತರ ಪರಿಹಾರಕ್ಕೆ ಕೇಂದ್ರವೇ ಹೊಣೆ
ಬರಗಾಲದ ಹಿನ್ನೆಲೆಯಲ್ಲಿ ರೈತರಿಗೆ ಇನ್ಪುಟ್ ಸಬ್ಸಿಡಿ ಮೂಲಕ ತಲಾ ₹2,500 ನೀಡುತ್ತಿರುವುದು ಸಣ್ಣ ಪ್ರಮಾಣದ ನೆರವು ಎಂಬುದು ಸರ್ಕಾರಕ್ಕೂ ಗೊತ್ತಿದೆ. ಆದರೆ, ರೈತರಿಗೆ ಸಮರ್ಪಕ ಪರಿಹಾರ ನೀಡಬೇಕಾದ ಹೊಣೆ ಕೇಂದ್ರ ಸರ್ಕಾರದ್ದಾಗಿದೆ ಎಂದು ಸಚಿವರು ಹೇಳಿದರು.
ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುವ ಸಂಸದರು ಕೇಂದ್ರ ಸರ್ಕಾರದ ಮುಂದೆ ರೈತರ ಪರವಾಗಿ ಧ್ವನಿ ಎತ್ತುತ್ತಿಲ್ಲ ಎಂದು ಟೀಕಿಸಿದ ಅವರು, ನಮ್ಮ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರ ಎದುರು ಮಾತನಾಡಲು ನಡುಗುತ್ತಾರೆ. ಪ್ರಧಾನಿಯವರ ಭೇಟಿಗೆ ಸಮಯವನ್ನೂ ಕೇಳುವುದಿಲ್ಲ; ಕೇಳಿದರೂ ಸಮಯ ಸಿಗುವುದಿಲ್ಲ ಎಂದು ವ್ಯಂಗ್ಯವಾಡಿದರು.


