ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಳ್ಳಲು ಆಗ್ರಹ
ಸಪ್ತಸಾಗರ ವಾರ್ತೆ, ಬೆಂಗಳೂರು, ಅ. 18:
ದೆಹಲಿಯಲ್ಲಿ ಪ್ರತಿಭಟನೆಗಳ ವರದಿ ಮಾಡುತ್ತಿದ್ದ ಪತ್ರಕರ್ತರು, ಮಹಿಳಾ ಪತ್ರಕರ್ತೆಯರು ಸೇರಿದಂತೆ ಮಾಧ್ಯಮ ಪ್ರತಿನಿಧಿಗಳ ಮೇಲೆ ಭದ್ರತಾ ಸಿಬ್ಬಂದಿ ನಡೆಸಿದ ಹಲ್ಲೆ, ಬಲಪ್ರಯೋಗ ಹಾಗೂ ಬಂಧನ ಕ್ರಮವನ್ನು ಬೆಂಗಳೂರಿನ ಹಿರಿಯ ಪತ್ರಕರ್ತರ ವೇದಿಕೆ ತೀವ್ರವಾಗಿ ಖಂಡಿಸಿದೆ.
ಪತ್ರಕರ್ತರ ವೃತ್ತಿಪರ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಪತ್ರಿಕಾ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಸ್ತಕ್ಷೇಪ ಎಂದು ವೇದಿಕೆ ಆಕ್ಷೇಪಿಸಿದೆ.
ಬೆಂಗಳೂರಿನಲ್ಲಿ ಇಂದು ನಡೆದ ವೇದಿಕೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಘಟನೆಯನ್ನು ಖಂಡಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ದೆಹಲಿಯ ಜಂತರ್ ಮಂತರ್ ಹಾಗೂ ಕನಾಟ್ ಪ್ಲೇಸ್ ಸೇರಿದಂತೆ ವಿವಿಧೆಡೆ ಪ್ರತಿಭಟನೆಗಳನ್ನು ವರದಿ ಮಾಡುತ್ತಿದ್ದ ಪತ್ರಕರ್ತರು ಪತ್ರಿಕಾ ಗುರುತಿನ ಚೀಟಿ ಪ್ರದರ್ಶಿಸಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ತಿಳಿಸಿದರೂ ಅವರನ್ನು ಬಲವಂತವಾಗಿ ವಶಕ್ಕೆ ಪಡೆಯಲಾಗಿದೆ. ವರದಿಗಾರಿಕೆಗೆ ಬಳಸುತ್ತಿದ್ದ ಮೊಬೈಲ್ ಫೋನ್ಗಳು ಮತ್ತು ಇತರ ಉಪಕರಣಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ವೇದಿಕೆ ತಿಳಿಸಿದೆ.
ಅಕ್ಟೋಬರ್ 11ರಂದು ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನಗಳ ಹೊರತಾಗಿಯೂ ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ ಎಂದು ವೇದಿಕೆ ಆರೋಪಿಸಿದೆ.
ವೇದಿಕೆಯ ಆಗ್ರಹಗಳು:
- ಪತ್ರಕರ್ತರ ಮೇಲಿನ ಹಲ್ಲೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು.
- ತಪ್ಪಿತಸ್ಥ ಭದ್ರತಾ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.
- ಪ್ರತಿಭಟನೆಗಳ ವರದಿ ಮಾಡುವ ಪತ್ರಕರ್ತರ ವೃತ್ತಿಪರ ಕರ್ತವ್ಯಕ್ಕೆ ಅಡ್ಡಿಪಡಿಸದಂತೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಖಚಿತಪಡಿಸಬೇಕು.
ಪತ್ರಕರ್ತರ ಹಕ್ಕುಗಳನ್ನು ರಕ್ಷಿಸಿ, ಅವರು ಭಯಮುಕ್ತವಾಗಿ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸುವುದು ಸರ್ಕಾರದ ಹೊಣೆಗಾರಿಕೆ ಎಂದು ವೇದಿಕೆ ಒತ್ತಿಹೇಳಿದೆ.
ವೇದಿಕೆಯ ಅಧ್ಯಕ್ಷ ಆರ್.ಪಿ. ಸಾಂಬಸದಾಶಿವ ರೆಡ್ಡಿ, ಉಪಾಧ್ಯಕ್ಷ ಸೋಮಸುಂದರ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಾಜೇಂದ್ರ ಕುಮಾರ್, ಜಂಟಿ ಕಾರ್ಯದರ್ಶಿ ಎಸ್.ಆರ್. ವೆಂಕಟೇಶ ಪ್ರಸಾದ್ ಹಾಗೂ ಖಜಾಂಚಿ ಬಿ. ನಾರಾಯಣ ಅವರು ನಿರ್ಣಯದಲ್ಲಿ ಭಾಗವಹಿಸಿದ್ದರು.


