ಪೇಂಟರ್ ಜತೆ ಸೇರಿ ಕೊಲೆಗೆ ಸ್ಕೆಚ್; ಮೂವರು ಆರೋಪಿಗಳ ಬಂಧನ
ಸಪ್ತಸಾಗರ ವಾರ್ತೆ,ವಿಜಯಪುರ, ಅ. 19:
ರಸ್ತೆ ಅಪಘಾತವೆಂದು ದಾಖಲಾಗಿದ್ದ ಪ್ರಕರಣವೊಂದು ಪೊಲೀಸರ ಚಾಣಾಕ್ಷ ತನಿಖೆಯಿಂದ ಪೂರ್ವಯೋಜಿತ ಕೊಲೆ ಎಂಬುದು ಬೆಳಕಿಗೆ ಬಂದಿದೆ. ಪತಿಯ ಹತ್ಯೆಗೆ ಪತ್ನಿಯೇ ಸಂಚು ರೂಪಿಸಿದ್ದು, ಆಕೆಗೆ ಪೇಂಟರ್ ಸೇರಿದಂತೆ ಇತರರು ಸಾಥ್ ನೀಡಿರುವ ಆಘಾತಕಾರಿ ಸಂಗತಿ ಬಯಲಾಗಿದೆ.
ಕಳೆದ ಅ. 4ರಂದು ನಗರದ ಜುಮನಾಳ ರಿಂಗ್ ರೋಡ್ ಬಳಿ ವಾಕಿಂಗ್‌ಗೆ ತೆರಳಿದ್ದ ರಾಜಶೇಖರ ಬಿರಾದಾರ ಅವರು ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದರು. ಮೇಲ್ನೋಟಕ್ಕೆ ಇದೊಂದು ರಸ್ತೆ ಅಪಘಾತವೆಂದು ಕಂಡುಬಂದಿದ್ದರೂ, ಪ್ರಕರಣದ ಸುತ್ತ ಅನುಮಾನ ಮೂಡಿದ್ದರಿಂದ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ತನಿಖೆ ಮುಂದುವರಿದಂತೆ ಇದು ಆಕಸ್ಮಿಕ ಘಟನೆಯಲ್ಲ, ಪೂರ್ವಯೋಜಿತ ಕೊಲೆ ಎಂಬುದು ದೃಢಪಟ್ಟಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆನಂದ ರಾವುತಪ್ಪ ಕಲ್ಲೂರ (25), ಅಶ್ವಿನಿ ರಾಜಶೇಖರ ಬಿರಾದಾರ (30) ಹಾಗೂ ಸಚಿನ ಪರಶುರಾಮ ಬಡಳ್ಳಿ (24) ಅವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪೇಂಟರ್ ಜತೆ ಬೆಳೆದ ಸ್ನೇಹವೇ ಕೊಲೆ ಸಂಚಿಗೆ ಕಾರಣ?
ಸುಮಾರು 10 ವರ್ಷಗಳ ಹಿಂದೆ ರಾಜಶೇಖರ ಮತ್ತು ಅಶ್ವಿನಿ ವಿವಾಹವಾಗಿದ್ದು, ದಂಪತಿಗೆ ಆರು ವರ್ಷದ ಅವಳಿ ಗಂಡು ಮಕ್ಕಳಿದ್ದಾರೆ. ಏಳು ತಿಂಗಳ ಹಿಂದೆ ಹೊಸ ಮನೆ ನಿರ್ಮಿಸಿದ್ದ ರಾಜಶೇಖರ, ಮನೆಯ ಪೇಂಟಿಂಗ್ ಕೆಲಸವನ್ನು ಮದೀನಾ ನಗರದ ಆನಂದ ಕಲ್ಲೂರನಿಗೆ ವಹಿಸಿದ್ದರು. ಈ ಸಂದರ್ಭದಲ್ಲಿ ಅಶ್ವಿನಿ ಮತ್ತು ಆನಂದ ನಡುವೆ ಪರಿಚಯ ಬೆಳೆದು ಸ್ನೇಹವಾಗಿ ಮುಂದುವರಿದಿತ್ತು.
ಪತಿಯಿಂದ ದೂರವಾಗಲು ಬಯಸಿದ್ದ ಅಶ್ವಿನಿ, ರಾಜಶೇಖರ ಅವರನ್ನು ಹತ್ಯೆ ಮಾಡುವ ಕುರಿತು ಆನಂದನೊಂದಿಗೆ ಚರ್ಚಿಸಿ ಸಂಚು ರೂಪಿಸಿದ್ದಳು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ವಾಕಿಂಗ್ ಸಮಯದ ಮಾಹಿತಿ ನೀಡಿ ಹತ್ಯೆಗೆ ಸಂಚು
ಯೋಜನೆಯಂತೆ, ಅ. 4ರಂದು ಮುಂಜಾನೆ ರಾಜಶೇಖರ ವಾಕಿಂಗ್‌ಗೆ ತೆರಳಿರುವ ಮಾಹಿತಿಯನ್ನು ಅಶ್ವಿನಿ, ಆನಂದನಿಗೆ ನೀಡಿದ್ದಳು. ಆನಂದ ತನ್ನ ಬೈಕ್‌ನಲ್ಲಿ ರಾಜಶೇಖರ ಅವರನ್ನು ಹಿಂಬಾಲಿಸಿ, ಅವರಿದ್ದ ಸ್ಥಳದ ಮಾಹಿತಿಯನ್ನು ಸಚಿನ ಪರಶುರಾಮ ಬಡಳ್ಳಿ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನಿಗೆ ತಿಳಿಸಿದ್ದನು.
ಬಳಿಕ ಸಚಿನ ಮತ್ತು ಬಾಲಕ ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನದಲ್ಲಿ ಬಂದು, ಜುಮನಾಳ ರಸ್ತೆಯ ಕಿಯಾ ಶೋರೂಂ ಸಮೀಪ ನಡೆದುಕೊಂಡು ಹೋಗುತ್ತಿದ್ದ ರಾಜಶೇಖರ ಅವರಿಗೆ ಹಿಂದಿನಿಂದ ವಾಹನ ಡಿಕ್ಕಿ ಹೊಡೆಸಿದ್ದಾರೆ. ಈ ಮೂಲಕ ಅಪಘಾತದಂತೆ ಬಿಂಬಿಸಿ ಹತ್ಯೆ ನಡೆಸಿರುವುದು ತನಿಖೆಯಲ್ಲಿ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿವೈಎಸ್ಪಿ ತನಿಖೆಯಲ್ಲಿ ಬಯಲಾದ ಸಂಚು
ಅಪಘಾತದ ಬಗ್ಗೆ ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಮುಂದಿನ ತನಿಖೆಯನ್ನು ವಿಜಯಪುರ ನಗರ ಡಿವೈಎಸ್ಪಿ ನಾಗರಾಜ ಜಿ. ಅವರಿಗೆ ವಹಿಸಲಾಗಿತ್ತು. ಅವರು ತನಿಖೆ ಕೈಗೊಂಡು ಪೇಂಟರ್ ಆನಂದ ಕಲ್ಲೂರನನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣದ ಹಿಂದಿನ ಸಂಚು ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ತಿಳಿಸಿದರು.


