ಏರೋಸ್ಪೇಸ್ ಪಾರ್ಕ್ ಉತ್ತರ ಕರ್ನಾಟಕದಲ್ಲಿ ಸ್ಥಾಪಿಸಿ: ಶಂಕರಗೌಡ ಬಿರಾದಾರ ಆಗ್ರಹ

ಸಪ್ತಸಾಗರ ವಾರ್ತೆ, ವಿಜಯಪುರ, ಜು. 21 :
ರಾಜ್ಯ ಸರ್ಕಾರ ದೇವನಹಳ್ಳಿ ಬಳಿ ಭೂಸ್ವಾಧೀನ ರದ್ದುಪಡಿಸಿದ ಹಿನ್ನಲೆಯಲ್ಲಿ ಉದ್ದೇಶಿತ ಏರೊಸ್ಪೇಸ್ ಪಾರ್ಕ್ ಅನ್ನು ಉತ್ತರ ಕರ್ನಾಟಕ ಭಾಗದಲ್ಲಿ ಸ್ಥಾಪಿಸಬೇಕೆಂದು ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಸರ್ಕಾರವನ್ನು ಆಗ್ರಹಿಸಿದ್ದಾರೆ
ಏರೊಸ್ಪೇಸ್ ಪಾರ್ಕ್ ಅನ್ನು ಉತ್ತರ ಕರ್ನಾಟಕದ ಯಾವುದಾದರೂ ಜಿಲ್ಲೆಯಲ್ಲಿ ಸ್ಥಾಪನೆ ಮಾಡಿದರೆ ಪ್ರಾದೇಶಿಕ ಅಸಮತೋಲನ ಕಡಿಮೆಯಾಗಲಿದೆ. ವೈಮಾನಿಕ ಸಂಶೋಧನೆ ಉತ್ಪಾದನೆ ರಿಪೇರಿ ರಕ್ಷಣೆ ವಿಭಾಗ ವಿಶೇಷವಾಗಿ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳ ಬಾಗಿಲನ್ನೇ ತೆರೆವುಯುವ ಏರೊಸ್ಪೇಸ್ ಪಾರ್ಕನ್ನು ಯಾವುದೇ ಕಾರಣಕ್ಕೂ ಕರ್ನಾಟಕವನ್ನು ಬಿಟ್ಟು ಬೇರೆ ರಾಜ್ಯಕ್ಕೆ ಹೋಗದ ಹಾಗೆ ಸರ್ಕಾರ ನೋಡಿಕೊಳ್ಳಬೇಕು. ಈಗಾಗಲೇ ಬೆಂಗಳೂರಿನ ಸುತ್ತ ಮುತ್ತಲೂ ಸಾಕಷ್ಟು ಕೈಗಾರಿಕೆ ಕ್ಷೇತ್ರ ಬೆಳವಣಿಗೆ ಆಗಿದೆ.
ಸಮಗ್ರ ಕರ್ನಾಟಕ ಸರ್ವತೋಮುಖ ಅಭಿವೃದ್ಧಿಗೆ ನಾಂದಿ ಹಾಡಿದಂತಾಗುತ್ತದೆ. ಅಲ್ಲದೆ ಉತ್ತರ ಕರ್ನಾಟಕದಲ್ಲಿ ಕೌಶಲಯುಕ್ತ ಮಾನವ ಸಂಪನ್ಮೂಲಕ್ಕೆ ಏನು ಕಮ್ಮಿ ಇಲ್ಲ. ಆರ್ಥಿಕವಾಗಿ ಹಿಂದುಳಿದ ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ಬರಡು ಭೂಮಿ ಕೂಡಾ ಇದೆ. ಈ ಕೈಗಾರಿಕೆಗೆ ಅಗತ್ಯ ಭೂಮಿ ಕೂಡಾ ಲಭ್ಯವಿದೆ. ಕೈಗಾರಿಕೆಗೆ ಬೇಕಾದ ಮೂಲಭೂತ ಸೌಕರ್ಯಗಳಾದ ನೀರು ರಾಷ್ಟ್ರೀಯ ಹೆದ್ದಾರಿ, ರೈಲು ಮಾರ್ಗ, ವಿಮಾನ ನಿಲ್ದಾಣವು ಕೂಡಾ ಉದ್ಘಾಟನೆಗೆ ಸಜ್ಜಾಗಿದೆ. ಉತ್ತರ ಕರ್ನಾಟಕದ ವಿದ್ಯಾವಂತ ನಿರುದ್ಯೋಗಿಗಳ ಸಮಸ್ಯಗೆ ಪರಿಹಾರ ಸಿಗುತ್ತದೆ ಎಂದರು.
ಉದ್ಯೋಗವನ್ನು ಅರಸಿ ಬೆಂಗಳೂರು, ಗೋವಾ, ಮಹಾರಾಷ್ಟ್ರಕ್ಕೆ ಉದ್ಯೋಗವನ್ನು ಅರಸಿ ಹೋಗುವುದನ್ನು ತಡೆಗಟ್ಟಬಹುದು. ಕೂಡಲೇ ರಾಜ್ಯ ಸರ್ಕಾರ ಉತ್ತರ ಕರ್ನಾಟಕ ಭಾಗದ ಜನರ ಬೇಡಿಕೆಗೆ ಸ್ಪಂದಿಸಬೇಕು ಹಾಗೂ ಉತ್ತರ ಕರ್ನಾಟಕ ಭಾಗದ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡವನ್ನು ಹಾಕಬೇಕು ಎಂದು ಆಗ್ರಹಿಸಿದ್ದಾರೆ.

Share