ಸಪ್ತಸಾಗರ ವಾರ್ತೆ, ವಿಜಯಪುರ, ಜೂ. 8:
ಶಿಕ್ಷಣದಿಂದ ಮಾತ್ರ ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ಸಾಧ್ಯ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಭಾನುವಾರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಏರ್ಪಡಿಸಿದ್ದ ಜಿಲ್ಲಾ ಕುರುಬ ಸಮಾಜದ ಪ್ರತಿಭಾ ಪುರಸ್ಕಾರ ಹಾಗೂ ಲೋಕಮಾತಾ ಅಹಲ್ಯಾಬಾಯಿ ಹೊಳ್ಳರ್ 301ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಹಲ್ಯಾಬಾಯಿ ಹೋಳ್ಕರ ಶ್ರೇಷ್ಠ ಮಹಿಳೆ. ಅಪ್ರತಿಮ ಹೋರಾಟಗಾರ್ತಿ. ಅಹಲ್ಯಾಬಾಯಿ ಹೋಳ್ಕರ್ ಶಿಕ್ಷಣಕ್ಕಾಗಿ ಹೆಚ್ಚಿನ ಒತ್ತು ನೀಡಿದ್ದರು ಎಂದರು.
ಸಮಾಜದ ಭವಿಷ್ಯಕ್ಕೆ ಶಿಕ್ಷಣವೇ ಭದ್ರ ಬುನಾದಿ. ಹೀಗಾಗಿ ನಾವು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸಬೇಕು. ಆಗ ಆ ಮಕ್ಕಳಿಗೆ ಉನ್ನತ ಹುದ್ದೆ ಪಡೆದು ತನ್ನ ಕುಟುಂಬದ ಜೊತೆ ಜೊತೆಯಲ್ಲಿ ಇಡೀ ಸಮಾಜವನ್ನೇ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯ ಸಿದ್ಧಾಂತದ ಮೇಲೆ ರಾಜಕಾರಣ ಮಾಡಿಕೊಂಡು ಬಂದವರು. ಶೋಷಿತ ಸಮಾಜಗಳಿಗೆ ಸಾಮಾಜಿಕ ನ್ಯಾಯ ಕೊಡಬೇಕು ಎನ್ನುವ ಸಂವಿಧಾನದ ಆಶಯಗಳ ಕನಸುಗಾರರಾಗಿದ್ದರು. ಬೇರೆ ಯಾರೂ ಅವರ ಸ್ಥಾನ ತುಂಬಲು ಸಾಧ್ಯವಿಲ್ಲ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಜಿಲ್ಲೆಯಲ್ಲಿ ಎರಡೂವರೆ ಲಕ್ಷ ಕುರುಬ ಜನಸಂಖ್ಯೆ ಇದ್ದರೂ ಒಬ್ಬರಾದರೂ ಕುರುಬ ಸಮಾಜದ ಶಾಸಕರಾಗದಿರುವುದು ದೊಡ್ಡ ದುರಂತ. ಇನ್ನಾದರೂ ನಾವು ಜಾಗೃತರಾಗಿ, ಎಲ್ಲ ಕ್ಷೇತ್ರದಲ್ಲೂ ಬೆಳವಣಿಗೆ ಕಾಣಬೇಕು. ನಾವು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.
ಮಹಿಳಾ ಆಯೋಗದ ರಾಜ್ಯಾಧ್ಯಕ್ಷೆ ನಾಗಲಕ್ಷ್ಮಿ ಮಾತನಾಡಿ, ಹೆಣ್ಣುಮಕ್ಕಳಿಗೆ ಬಹಳಷ್ಟು ಜವಾಬ್ದಾರಿ ಇರುತ್ತದೆ. ಅಂಥದರಲ್ಲಿ ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಸಮಾಜದ ಒಳಿತಿಗಾಗಿ ಹಾಗೂ ಶಿಕ್ಷಣಕ್ಕಾಗಿ ಅಹರ್ನಿಸಿ ದುಡಿದಿದ್ದಾರೆ ಎಂದು ಬಣ್ಣಿಸಿದರು.
ಸಾನ್ನಿಧ್ಯ ವಹಿಸಿದ್ದ ಅಭಿನವ ಪುಂಡಲಿಂಗ ಸ್ವಾಮೀಜಿ ಮಾತನಾಡಿ, ಇದೇ ಮೊದಲ ಬಾರಿಗೆ ವಿಜಯಪುರದಲ್ಲಿ ರಾಜಮಾತೆ ಅಹಲ್ಯಾಬಾಯಿ ಹೊಳ್ಳರ ಅವರ ಪ್ರತಿಮೆ ನಿರ್ಮಿಸಿರುವುದು ಹೆಮ್ಮೆಯ ಸಂಗತಿ. ಯಾರಲ್ಲಿ ಮಾತೃ ಹೃದಯ ಇರುತ್ತದೆಯೋ ಅವರು ರಾಜಕೀಯದಲ್ಲಿ ಭವಿಷ್ಯ ಕಟ್ಟಿಕೊಳ್ಳುತ್ತಾರೆ. ಡಾ.ಯತೀಂದ್ರ ಅವರಲ್ಲಿ ಆ ಗುಣ ಇದೆ ಎಂದರು.
ಶಾಸಕ ಉಮೇಶ ಮೇಟಿ, ಮಹಾಪೌರ ಎಂ.ಎಸ್. ಕರಡಿ, ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣ, ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕ್ಕಿ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಸುಜಾತ ಕಳ್ಳಿಮನಿ, ಅಹಿಂದ ಮುಖಂಡರಾದ ಸೋಮನಾಥ ಕಳ್ಳಿಮನಿ, ಮೋಹನ ದಳವಾಯಿ, ಸಿದ್ದು ಬಾವಿಕಟ್ಟಿ, ಈರಣ್ಣ ಕುಂಪಿ, ಮಲ್ಲು ಬಿದರಿ, ವಿಜಯ ಭಮಗೊಂಡ, ರವಿ ಕಿತ್ತೂರ, ಪ್ರೊ.ಸುನಿಲ ತೊಂಟಾಪುರ, ರಾಜು ಕಗ್ಗೋಡ, ಬನ್ನೆಪ್ಪ ಜೋಗಿ, ಬಸವರಾಜ ಕಂಕಣವಾಡಿ, ವಿಠಲ ಬಳ್ಳೂರ, ಸದಾಶಿವ ಪೂಜಾರಿ, ಚಂದ್ರಶೇಖರ ನುಗ್ಗಲಿ, ಅಧಿಕಾರಿಗಳಾದ ಪುಂಡಲೀಕ ಮಾನವರ, ಈರಣ್ಣ ಆಶಾಪುರ, ಸಿದ್ದಪ್ಪ ಬಿಂಜಗೇರಿ, ಮಹಾದೇವ, ಡಾ. ಸಂಗಣ್ಣ ಲಕ್ಕಣ್ಣವರ, ಡಾ. ಗೌತಮ ವಗ್ಗರ, ಡಾ. ರವೀಂದ್ರ ಮದ್ಧರಕಿ ಹಾಗೂ ಮತ್ತಿತರರು ಭಾಗವಹಿಸಿದ್ದರು.
ಶಿಕ್ಷಣದಿಂದ ಮಾತ್ರ ಮಕ್ಕಳ ಉತ್ತಮ ಭವಿಷ್ಯ ಸಾಧ್ಯ- ಸಚಿವ ಯತೀಂದ್ರ ಕುರುಬ ಸಮಾಜದ ಪ್ರತಿಭಾ ಪುರಸ್ಕಾರ ಸಮಾರಂಭ


