ಗಣೇಶೋತ್ಸವದ ಸಾರ್ಥಕತೆಗೆ ಆರೋಗ್ಯ ಸೇವೆಯ ಸಂಕಲ್ಪ

ಶಂಕರಲಿಂಗ ಗಜಾನನ ತರುಣ ಮಂಡಳಿಯಿಂದ ಸೆ.16ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 15: ಗಣೇಶೋತ್ಸವವನ್ನು ಸಾಮಾಜಿಕ ಸೇವೆಯೊಂದಿಗೆ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಶ್ರೀ ಶಂಕರಲಿಂಗ ಗಜಾನನ ತರುಣ ಮಂಡಳಿ ವತಿಯಿಂದ ‘ಸಂಕಲ್ಪ ಸಿದ್ಧಿ’ ಮಹಾ ಗಣಪತಿ ಉತ್ಸವದ ಅಂಗವಾಗಿ ಸೆ.16ರಂದು ಬೆಳಿಗ್ಗೆ 10 ಗಂಟೆಯಿಂದ ಶ್ರೀ ಶಂಕರಲಿಂಗ ದೇವಸ್ಥಾನದ ಆವರಣದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಶಿಬಿರದಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳ ಕುರಿತು ತಜ್ಞ ವೈದ್ಯರಿಂದ ತಪಾಸಣೆ ಮತ್ತು ಅಗತ್ಯ ಸಲಹೆ ನೀಡಲಾಗುವುದು. ಡಾ. ಆನಂದ ಕಣಬೂರ ಅವರಿಂದ ಉಚಿತ ನೇತ್ರ ತಪಾಸಣೆ, ಡಾ. ವಿಜಯೇಂದ್ರ ಕಣಬೂರ ಅವರಿಂದ ಮಧುಮೇಹ ತಪಾಸಣೆ, ಡಾ. ರಾಜಶ್ರೀ ಹಿರೇಮಠ ಹಾಗೂ ಡಾ. ಅಶ್ವಿನಿ ಜಾಗಿರದಾರ ಅವರಿಂದ ಆಕ್ಯುಪ್ರೆಶರ್, ಕಲರ್ ಥೆರಪಿ ಮತ್ತು ಸೀಡ್ಸ್ ಥೆರಪಿ, ಡಾ. ಸುಮನ ನಾಗರಾಜ ಹೇರಲಗಿ ಅವರಿಂದ ಉಚಿತ ದಂತ ತಪಾಸಣೆ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಯಲಿದೆ.
ತಪಾಸಣೆಯ ಬಳಿಕ ಅಗತ್ಯವಿರುವವರಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಗೆ ಉಚಿತ ಔಷಧಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿದೆ.

ವೈದ್ಯಕೀಯ ದಾಖಲೆ ತರಲು ಮನವಿ

ಶಿಬಿರಕ್ಕೆ ಆಗಮಿಸುವವರು ತಮ್ಮ ಹಿಂದಿನ ವೈದ್ಯಕೀಯ ವರದಿಗಳು ಹಾಗೂ ವೈದ್ಯರ ಸಲಹಾ ಪತ್ರಗಳನ್ನು ಕಡ್ಡಾಯವಾಗಿ ತರಬೇಕು. ಮಧುಮೇಹ ತಪಾಸಣೆ ಮಾಡಿಸಿಕೊಳ್ಳುವವರು ಖಾಲಿ ಹೊಟ್ಟೆಯಲ್ಲಿ ಆಗಮಿಸುವಂತೆ ಮಂಡಳಿ ಮನವಿ ಮಾಡಿದೆ.
ಸಾರ್ವಜನಿಕರು ಗಣೇಶೋತ್ಸವದ ಅಂಗವಾಗಿ ಆಯೋಜಿಸಿರುವ ಈ ಉಚಿತ ಆರೋಗ್ಯ ಸೇವೆಯ ಸದುಪಯೋಗ ಪಡೆದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀ ಶಂಕರಲಿಂಗ ಗಜಾನನ ತರುಣ ಮಂಡಳಿ ಕೋರಿದೆ.
ಹೆಚ್ಚಿನ ಮಾಹಿತಿಗೆ:
ದಾನಪ್ಪ ಕುರ್ಲೆ: 9448644137
ಮನೋಹರ ಅತನುರ: 9448182067

Share this