ಪಿಪಿಪಿ ಮಾದರಿ ಮೆಡಿಕಲ್ ಕಾಲೇಜ್ ಕೈ ಬಿಡಲು ಒತ್ತಾಯಮುಖ್ಯಮಂತ್ರಿ ಬಳಿ ನಿಯೋಗ ಹೋಗಲು ನಿರ್ಧಾರ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 5: ವಿಜಯಪುರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜ್ ಸ್ಥಾಪನೆ ಕೈ ಬಿಟ್ಟು ಪೂರ್ಣವಾಗಿ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಯ ಕೂಗು ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದ್ದು, ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ವಿವಿಧ ಸಂಘಟನೆ, ರೈತ ಸಂಘಟನೆಗಳು ಸೇರಿದಂತೆ ಒಂದೇ ವೇದಿಕೆಯಡಿಯಲ್ಲಿ ಹೋರಾಟ ನಡೆಸಲು `ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಹೋರಾಟ ಸಮಿತಿ’ ಅಸ್ತಿತ್ವಕ್ಕೆ ಬಂದಿದ್ದು, ಈ ಸಮಿತಿ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಗೆ ನಾಳೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಈ ಸಮಿತಿ ನಿಯೋಗ ಭೇಟಿ ಮಾಡಿ ಈ ಪಿಪಿಪಿ ಪ್ರಕ್ರಿಯೆ ಕೈ ಬಿಟ್ಟು ಸಂಪೂರ್ಣ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಹಕ್ಕೊತ್ತಾಯ ಮಂಡಿಸಲಿದೆ. ಅದೇ ತೆರನಾಗಿ ಸಮಿತಿ ಸೆ.೯ ರಂದು ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡ ವಿವಿಧ ಸಂಘಟನೆಯ ಸದಸ್ಯರು ಮುಖ್ಯಮಂತ್ರಿಗಳನ್ನು ನಿಯೋಗದೊಂದಿಗೆ ಭೇಟಿ ಮಾಡಿ ಈ ವಿಷಯದ ಕುರಿತು ಮನವರಿಕೆ ಮಾಡಿಕೊಡಲಾಗುವುದು ಎಂದರು.
ದಿ.೯ ರಂದು ನಗರದ ಶ್ರೀ ಸಿದ್ದೇಶ್ವರ ದೇವಾಲಯದಿಂದ ಡಾ.ಅಂಬೇಡ್ಕರ ವೃತ್ತದವರೆಗೂ ಬೃಹತ್ ರ‍್ಯಾಲಿ ನಡೆಸಿ ಸರ್ಕಾರಕ್ಕೆ ಮತ್ತೊಮ್ಮೆ ಹಕ್ಕೊತ್ತಾಯ ಮಂಡಿಸಲು ಸಹ ನಿರ್ಧರಿಸಲಾಗಿದೆ ಎಂದು ಪ್ರಕಟಿಸಿದರು.
ಹಿರಿಯ ಪತ್ರಕರ್ತ, ಹೋರಾಟಗಾರ ಅನಿಲ ಹೊಸಮನಿ ಮಾತನಾಡಿ, ವಿಜಯಪುರ ಜಿಲ್ಲೆಯ ಜನತೆ ಬರ, ಅತಿವೃಷ್ಟಿ ಹೀಗೆ ನಾನಾ ರೀತಿಯ ತೊಂದರೆ ಎದುರಿಸುತ್ತಲೇ ಇದ್ದಾರೆ. ದುಬಾರಿ ದುನಿಯಾದಲ್ಲಿ ಚಿಕಿತ್ಸೆಗಾಗಿ ಹಣ ಹೊಂದಿಸಲು ಸಾಲ ಮಾಡುವ ಪರಿಸ್ಥಿತಿ ಇದೆ. ಈ ಸಂದರ್ಭದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪಿಸಿ ಬಡಜನರಿಗೆ ಉತ್ತಮ ಆರೋಗ್ಯ ಸೌಲಭ್ಯ ಹಾಗೂ ಬಡ ವಿದ್ಯಾರ್ಥಿಗಳಿಗೆ ವೈದ್ಯರಾಗುವ ಕನಸು ನನಸು ಮಾಡುವಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆ ದಶಕಗಳ ಕೂಗು. ಆದರೆ ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜ್ ಮಾಡಿದರೆ ವಿದ್ಯಾರ್ಥಿ, ಬಡ ರೋಗಿಗಳಿಗೂ ದೊಡ್ಡಮಟ್ಟದ ಅಪಾಯ ಎಂದು ಆತಂಕ ವ್ಯಕ್ತಪಡಿಸಿದರು.
ಹೋರಾಟಗಾರ ಭಿ. ಭಗವಾನರೆಡ್ಡಿ ಮಾತನಾಡಿ, ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಈಗಾಗಲೇ ಹಲವಾರು ಸೌಲಭ್ಯಗಳಿವೆ. ಪೂರಕವಾಗಿ ೧೪೯.೧೨ ಎಕರೆ ಜಾಗ, ೧೫೦೦ ಕ್ಕೂ ಹೆಚ್ಚು ಒಳ ರೋಗಿಗಳ ದಾಖಲಾತಿ, ಸಿ.ಟಿ-ಎಂಆರ್‌ಐ, ಸುಸಜ್ಜಿತ ತಾಯಿ-ಮಕ್ಕಳ ಆಸ್ಪತ್ರೆ, ಶಸ್ತ್ರ ಚಿಕಿತ್ಸೆ ಹೀಗೆ ಮೆಡಿಕಲ್ ಕಾಲೇಜ್‌ಗೆ ಬೇಕಿರುವ ಎಲ್ಲ ಸೌಲಭ್ಯಗಳು ಈಗಾಗಲೇ ರೆಡಿಮೇಡ್ ರೂಪದಲ್ಲಿವೆ. ಹೀಗಿದ್ದರೂ ಖಾಸಗಿಯವರ ಸುಪರ್ದಿಯಲ್ಲಿ ಮೆಡಿಕಲ್ ಕಾಲೇಜ್ ಆದರೆ ಅದು ಶೋಷಣೆಗೂ ದಾರಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಜೆಟ್ ಕೊರತೆ ಎಂಬ ನೆಪದಿಂದ ಬಡವರ ಮೇಲೆ ಶೋಷಣೆ ಮಾಡುವ ಯೋಜನೆ ಹೇರಿಕೆ ಬೇಡ ಎಂದು ಒತ್ತಾಯಿಸಿದರು.
ದಿ.೯ ರಂದು ಬೃಹತ್ ಹೋರಾಟ ನಡೆಯಲಿದ್ದು, ಪ್ರತಿಯೊಬ್ಬರು ಈ ಹೋರಾಟಕ್ಕೆ ಕೈ ಜೋಡಿಸಬೇಕು ಎಂದು ಸಮಿತಿ ಪದಾಧಿಕಾರಿಗಳು ಒಕ್ಕೊರೆಲಿನಿಂದ ಒತ್ತಾಯಿಸಿದರು.
ಸಮಿತಿಯ ನಾಯಕರಾದ ಶ್ರೀನಾಥ ಪೂಜಾರಿ, ಅಣ್ಣಾರಾಯ ಈಳಗೇರ, ಅಕ್ರಂ ಮಾಶ್ಯಾಳಕರ, ಮಲ್ಲಿಕಾರ್ಜುನ ಬಟಗಿ, ಅರವಿಂದ ಕುಲಕರ್ಣಿ ಸೇರಿದಂತೆ ಅನೇಕ ಸಂಘಟನೆಯ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Share