ಸಪ್ತಸಾಗರ ವಾರ್ತೆ,ವಿಜಯಪುರ, ಜು. 25:
ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಚಡ್ಡಿ ಗ್ಯಾಂಗ್ ಕಾಣಿಸಿಕೊಂಡು ಜನರಲ್ಲಿ ಭಯದ ವಾತಾವರಣ ಮೂಡಿಸಿದೆ.
ಈ ಹಿಂದೆ ವಿಜಯಪುರ ಜಿಲ್ಲೆಯಲ್ಲಿ ಚಡ್ಡಿ ಗ್ಯಾಂಗ್ ಜನರ ನಿದ್ರೆಗೆಡಿಸಿ ಭಯದ ವಾತಾವರಣ ಮೂಡಿಸಿತ್ತು. ಕೆಲವು ತಿಂಗಳುಗಳಿಂದ ಚಡ್ಡಿ ಗ್ಯಾಂಗ್ ಉಪಟಳ ಇಲ್ಲವಾಗಿ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ಈಗ ಮತ್ತೆ ಜಿಲ್ಲೆಯ ತಾಳಿಕೋಟೆ ಪಟ್ಟಣದ ಗಣೇಶನಗರದಲ್ಲಿ
ಚಡ್ಡಿ ಗ್ಯಾಂಗ್ ಕದೀಮರು ಬಾಲ ಬಿಚ್ಚಿದ್ದಾರೆ. ಈ ಕದೀಮರ ಚಲನವಲನ ಸಿಸಿ ಕೆಮೆರಾದಲ್ಲಿ ಸೆರೆಯಾಗಿದೆ.
ಆರು ಜನರು ಇರುವ ಕಳ್ಳರ ಚಡ್ಡಿ ಗ್ಯಾಂಗ್ ಮುಖಕ್ಕೆ ಮಾಸ್ಕ್, ಬನಿಯನ್ ಹಾಗೂ ಚಡ್ಡಿ ಧರಿಸಿ ಕೈಯಲ್ಲಿ ಮಾರಕಾಸ್ತ್ರ, ದೊಣ್ಣೆ, ರಾಡ್ ಹಿಡಿದುಕೊಂಡು ತಾಳಿಕೋಟೆ ಪಟ್ಟಣದ ಗಣೇಶ ನಗರದ ಮನೆಯೊಂದರ ಕಳ್ಳತನ ಮಾಡುವ ಯತ್ನ ಮಾಡಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ವೇಳೆ ನಾಯಿಗಳು ಬೊಗಳಿದ್ದರಿಂದ ಜನರು ಎಚ್ಚರಗೊಂಡಿದ್ದಾರೆ. ಆಗ ಕಳ್ಳರು ಕಾಲ್ಕಿತ್ತಿದ್ದಾರೆ.
ಇದು ಚಡ್ಡಿ ಗ್ಯಾಂಗ್ ಅಥವಾ ಪಾರ್ಧಿ ಗ್ಯಾಂಗ್ ಇರಬಹುದು ಎಂದು ಜನರು ಆತಂಕಗೊಂಡಿದ್ದಾರೆ.
ರಾತ್ರಿ ವೇಳೆ ಅಪರಿಚಿತರು ಕಂಡು ಬಂದರೆ ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
ತಾಳಿಕೋಟೆಯಲ್ಲಿ ಕಳ್ಳರ ಚಡ್ಡಿ ಗ್ಯಾಂಗ್ ಸಿಸಿ ಕ್ಯಾಮೆರಾದಲ್ಲಿ ಸೆರೆ: ಜನರಲ್ಲಿ ಆತಂಕ


