ಅನುದಾನ ಲಭ್ಯತೆ ಆಧರಿಸಿ ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜ್: ಸಚಿವ ಎಂ.ಬಿ. ಪಾಟೀಲ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 6 :
ಅನುದಾನ ಲಭ್ಯತೆ ಆಧರಿಸಿ ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು,
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪಿಸಲಾಗುವುದು.
ಪಿಪಿಪಿ ಮಾಡುವುದಿಲ್ಲ. ಅನುದಾನ ಲಭ್ಯತೆ ನೋಡಿಕೊಂಡು ಸರ್ಕಾರಿ ಮೆಡಿಕಲ್ ಕಾಲೇಜು ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಹೀಗಿದ್ದೂ ಈ ಕುರಿತು ಲಿಖಿತ ರೂಪದಲ್ಲಿ ಭರವಸೆ ಕೊಡಬೇಕು. ಕ್ಯಾಬಿನೆಟ್ ನಲ್ಲಿ ಘೋಷಿಸಬೇಕು ಎಂದು ಪಟ್ಟು ಹಿಡಿದು ಹೋರಾಟ ಮಾಡುವುದು ಯಾವ ಉದ್ದೇಶಕ್ಕೆ ಎಂಬುವುದು ತಿಳಿಯುತ್ತಿಲ. ದಿನಂಪ್ರತಿ ಸಾವಿರ ಹೋರಾಟ ನಡೆಯುತ್ತವೆ. ಭರವಸೆ ಬರೆದು ಕೊಡುವುದು ಸಾಧ್ಯವಿಲ್ಲ ಎಂದರು.
ನನಗೆ ಹೋರಾಟಗಾರರ ಬಗ್ಗೆ ಈಗಲೂ ಗೌರವವಿದೆ. ಆದರೆ ಸ್ವಾಮೀಜಿಗಳು ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ್ದು ಸರಿಯಲ್ಲ, ಯಾರೇ ಇರಲಿ ಕಪಾಳ ಮೋಕ್ಷ ಮಾಡಿದರೆ ಸಿಟ್ಟು ಬರುವುದು ಸ್ವಾಭಾವಿಕ ಎಂದು ಸಚಿವ ಡಾ.ಎಂ.ಬಿ. ಪಾಟೀಲ ನುಡಿದರು.
ಆರಕ್ಷಕ ಅಧಿಕಾರಿಗಳ ಮೇಲೆ ಕಪಾಳಮೋಕ್ಷ ಮಾಡಿದ ಸ್ವಾಮೀಜಿಗಳ ಕ್ರಮವನ್ನು ಖಂಡಿಸುವ ಜೊತೆಗೆ ಸರ್ಕಾರಿ ವೈದ್ಯಕೀಯ ಕಾಲೇಜ್‌ಗೆ ನಾನು ಈಗಲೂ ಬೆಂಬಲವಾಗಿಯೇ ಇರುವೆ. ಮುಖ್ಯಮಂತ್ರಿಗಳು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದನೆ ಮಾಡುತ್ತಾರೆ. ನಮ್ಮ ಮೇಲೆ ನಂಬಿಕೆ ಇರಬೇಕು ಎಂದರು.
ಹೋರಾಟಗಾರರ ಬಗ್ಗೆ ನನಗೆ ಗೌರವ ಇದೆ. ಹೋರಾಟದ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗಿದೆ ಎಂದರು.
ನಾನು ಸರ್ಕಾರಿ ಮೆಡಿಕಲ್ ಕಾಲೇಜ್ ಪರವಾಗಿ ಗಟ್ಟಿಯಾದ ನಿಲುವು ವ್ಯಕ್ತಪಡಿಸಿರುವೆ,. ಹೋರಾಟಗಾರರನ್ನು ಸಿ.ಎಂ ಅವರಿಗೆ ಭೇಟಿ ಮಾಡಿಸಿರುವೆ. ಇನ್ನೊಮ್ಮೆಯೂ ಭೆಟ್ಟಿ ಮಾಡಿಸುವುದಾಗಿ ಭರವಸೆ ನೀಡಿದ್ದೇನೆ. ನನ್ನಲ್ಲಿ ಸ್ಪಷ್ಟತೆ ಇದೆ. ಇಷ್ಟೆಲ್ಲಾ ಭರವಸೆ ನೀಡಿದರೂ ಹೋರಾಟ ಮುಂದುವರೆಸಿದರ ಬಗ್ಗೆ ಉದ್ದೇಶ ಅರ್ಥವಾಗುತ್ತಿಲ್ಲ ಎಂದು ಹೇಳಿದರು. ಪ್ರತಿಭಟನಾಕಾರರ ಬಂಧನ ಬಗ್ಗೆ ನಾನು ಯಾವ ಪ್ರತಿಕ್ರಿಯೆ ನೀಡುವುದಿಲ್ಲ. ಅದಕ್ಕೆ ಇಲಾಖೆ ಇದೆ ಎಂದರು.

10 ಕ್ಕೆ 11 ಅಂಕ ಕೊಡುವೆ
ಸಿ.ಎಂ. ಸಿದ್ದರಾಮಯ್ಯ ಸೈದ್ಧಾಂತಿಕ ಹೋರಾಟ ಮಾಡುತ್ತ ಬಂದವರು. ಕೃಷಿ ಕುಟುಂಬದಲ್ಲಿ ಜನಿಸಿ ಹಿಂದುಳಿದ, ಅಲ್ಪಸಂಖ್ಯಾತ, ದಲಿತ,, ಕೃಷಿಕರ ಬಗ್ಗೆ ಅಪಾರ ಕಾಳಜಿ ಬದ್ಧತೆ ಹೊಂದಿದವರು. ಸಮಾಜವಾದಿ ಹಿನ್ನೆಲೆಯಿಂದ ಬಂದ ನಾಯಕರು ಎಂದು ಎಂ.ಬಿ. ಪಾಟೀಲ ಸಿದ್ಧರಾಮಯ್ಯ ಅವರ ದಾಖಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅನ್ನಭಾಗ್ಯ, ಕ್ಷೀರ ಭಾಗ್ಯ, ಕೃಷಿ ಭಾಗ್ಯ, ಪಂಚ ಗ್ಯಾರಂಟಿ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆ ನಮಗೆಲ್ಲ ಹೆಮ್ಮೆ ಇದೆ. ದೇವರಾಜ್ ಅರಸು, ಸಿದ್ದರಾಮಯ್ಯ ಶ್ರೇಷ್ಠ ನಾಯಕರು. ಸಿಎಂ ಆಡಳಿತಕ್ಕೆ 10 ರ ಪೈಕಿ 11 ಅಂಕ ಕೊಡುವೆ ಎಂದರು.
ಸಿಎಂ ದಾಖಲೆಗೆ ಬಿಜೆಪಿ ವಿರೋಧ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಏನು ಮಾಡಲು ಆಗುತ್ತದೆ. ಅವರ ಅವಧಿಯಲ್ಲಿ ನಾಲ್ಕು ವರ್ಷ ಏನು ಸಾಧನೆ ಮಾಡಿದರು? ಯಡಿಯೂರಪ್ಪರನ್ನು ಒಂದೇ ಅವಧಿಗೆ ಮುಖ್ಯಮಂತ್ರಿಯಾಗಲು ಬಿಜೆಪಿಗರು ಬಿಡಲಿಲ್ಲ. ಎರಡೂ ಬಾರಿ ಪಾಪ ಅವಧಿಗೂ ಮುನ್ನವೇ ರಾಜಿನಾಮೆ ನೀಡುವಂತೆ ಮಾಡಿದರು. ಯಡಿಯೂರಪ್ಪ ಅವರನ್ನು ಎರಡು ಬಾರಿ ಅವಧಿ ಪೂರ್ಣಗೊಳಿಸದಂತೆ ಮಾಡಿದ್ದೇ ಬಿಜೆಪಿ ಸಾಧನೆ ಎಂದರು.
ಸಿಎಂ ಅವರು ರಾಣಿ ಚೆನ್ನಮ್ಮ ಮೂರ್ತಿ ಉದ್ಘಾಟನೆಗೆ ಪಂಚಮಸಾಲಿ ಮುಖಂಡರ ವಿರೋಧ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಉದ್ಘಾಟನೆಗೆ ಯಾವುದೇ ವಿರೋಧ, ಗೊಂದಲವಿಲ್ಲ, ರಾಣಿ ಚೆನ್ನಮ್ಮ ಮೂರ್ತಿ ಉದ್ಘಾಟನೆಗೆ ಪಂಚಮಸಾಲಿ ಸಮುದಾಯ ವಿರೋಧ ಅನ್ನುವುದು ಮುಗಿದು ಹೋದ ಅಧ್ಯಾಯ. ಈಗಾಗಲೇ ಪಂಚಮಸಾಲಿ ಜಗದ್ಗುರುಗಳು ಪಂಚಮಸಾಲಿ 2ಎ ಮೀಸಲಾತಿ ಹೋರಾಟಕ್ಕೂ ಹಾಗೂ ಈ ಸಮಾರಂಭಕ್ಕೂ ಸಂಬಂಧವೇ ಇಲ್ಲ. ರಾಣಿ ಚೆನ್ನಮ್ಮ ದೇಶದ ಆಸ್ತಿ. ಸ್ವಾತಂತ್ರ‍್ಯಕ್ಕಾಗಿ ಹೋರಾಡಿದವರು. ಕನ್ನಡ ನಾಡಿನ ಶ್ರೇಷ್ಠ ಮಹಿಳೆ ಎಂದರು.

Share this