ವಿಜಯಪುರದಲ್ಲಿ ಡಿ. 6ರಂದು ಬೃಹತ್ ಕ್ಯಾಂಡಲ್ ಮಾರ್ಚ್

ಸಪ್ತಸಾಗರ ವಾರ್ತೆ ವಿಜಯಪುರ, ಡಿ. 2: ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಸಾವಿರಾರು ವಿದ್ಯಾರ್ಥಿಗಳಿಂದ ಬೃಹತ್ ಕ್ಯಾಂಡಲ್ ಮಾರ್ಚ್ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋದ್ದಾರ, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ ಪರಿಷತ್ ಮುಖಂಡರಾದ ಅಕ್ಷಯ್ ಕುಮಾರ್ ಅಜಮನಿ ಹಾಗೂ ಮಾದೇಶ ಚಲವಾದಿ ಮಂಗಳವಾರ ಕಾರ್ಯಕ್ರಮದ ಪೋಸ್ಟರ್‌ನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋದ್ದಾರ ಮಾತನಾಡಿ, ಬರುವ ಡಿಸೆಂಬರ್ 6ರಂದು ಜಿಲ್ಲೆಯ ವಿದ್ಯಾರ್ಥಿ ಮತ್ತು ಯುವಜನರ ನೇತೃತ್ವದಲ್ಲಿ ಬೃಹತ್ ಕ್ಯಾಂಡಲ್ ಮಾರ್ಚ್ ನಡೆಯಲಿದೆ. ವಿಜಯಪುರ ನಗರದ ಶಿವಾಜಿ ಸರ್ಕಲ್‌ನಿಂದ ಅಂಬೇಡ್ಕರ್ ಸರ್ಕಲ್ ವರೆಗೆ ಸಾವಿರಾರು ವಿದ್ಯಾರ್ಥಿಗಳು ಕ್ಯಾಂಡಲ್ ಹಿಡಿದು ಶಾಂತಿಯುತ ರ್ಯಾಲಿಯಲ್ಲಿ ಭಾಗವಹಿಸಲಿದ್ದು, ಅಂಬೇಡ್ಕರ್ ಅವರ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಿದ್ದಾರೆ.
ಈ ವಿನೂತನ ಕಾರ್ಯಕ್ರಮದಲ್ಲಿ ಜಿಲ್ಲೆಯ ಉನ್ನತಾಧಿಕಾರಿಗಳು, ಚಿಂತಕರು, ಬರಹಗಾರರು, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಎಲ್ಲಾ ಅನುಯಾಯಿಗಳು, ಜಿಲ್ಲೆಯ ದಲಿತ ಸಂಘಟನೆಗಳ ಮುಖಂಡರು, ವಿದ್ಯಾರ್ಥಿ–ಯುವಜನರು, ಮಹಿಳೆಯರು, ಹಿರಿಯರು ಮತ್ತು ನಗರದ ಶೋಷಿತ ಸಮುದಾಯದ ಎಲ್ಲ ವರ್ಗದ ಜನರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ವಿನಂತಿ ಮಾಡಿದ್ದಾರೆ.

Share this