ಸಚಿವ ಎಂ.ಬಿ. ಪಾಟೀಲರಿಗೆ ಜಿಗಜಿಣಗಿ ಟಾಂಗ್

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 30:
ಗೋಲಗುಂಬಜ್ ಎಕ್ಸಪ್ರೆಸ್ ರೈಲಿನ ಅವಧಿ ಕಡಿಮೆ ಮಾಡಲು ಹುಬ್ಬಳ್ಳಿ ಬೈಪಾಸ್ ಹಾಗೂ ಗದಗ ಬೈಪಾಸ್ ಮೂಲಕ ಸಂಚರಿಸುವಂತೆ ಮಾಡುವಲ್ಲಿ ಸಚಿವ ಎಂ. ಬಿ. ಪಾಟೀಲರ ಪಾತ್ರವಿಲ್ಲ. ನಾನು ಮಾಡಿದ್ದನ್ನು ತಾವೇ ಮಾಡಿದ ಕೆಲಸ ಎಂದು ಸಚಿವ ಪಾಟೀಲ ಬಿಂಬಿಸಿಕೊಳ್ಳುವುದು ಸರಿಯಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಗೋಲಗುಂಬಜ್ ಎಕ್ಸಪ್ರೆಸ್ ರೈಲಿನ ಅವಧಿ ಕಡಿಮೆ ಮಾಡಲು ಹುಬ್ಬಳ್ಳಿ ಬೈಪಾಸ್ ಹಾಗೂ ಗದಗ ಬೈಪಾಸ್ ಮೂಲಕ ಸಂಚರಿಸುವಂತೆ ಮಾಡಲು ಕಳೆದ ಮೂರು ವರ್ಷಗಳ ನನ್ನ ಸತತ ಪ್ರಯತ್ನವಿದೆ. ನನ್ನ ಹಾವೇರಿ ಅಂದಿನ ಸಂಸದರಾಗಿದ್ದ ಶಿವಕುಮಾರ ಉದಾಸಿ ಅವರು ಸೇರಿದಂತೆ ಅನೇಕರ ಪ್ರಯತ್ನದಿಂದ ಈ ಕೆಲಸ‌ ಸಾಧ್ಯವಾಗಿದೆ. ಸಚಿವ ಡಾ.ಎಂ.ಬಿ. ಪಾಟೀಲರು ಮೊದಲು ರಾಜ್ಯ ಸರ್ಕಾರದ ಕೆಲಸವನ್ನು ನೀಟಾಗಿ ಮಾಡಲಿ ಎಂದು ಸಂಸದ ರಮೇಶ ಜಿಗಜಿಣಗಿ ಛೇಡಿಸಿದ್ದಾರೆ.
ಈ ಕುರಿತು ಸಚಿವ ಡಾ.ಎಂ.ಬಿ. ಪಾಟೀಲರಿಗೆ ಪತ್ರಿಕಾ ಹೇಳಿಕೆ ಮೂಲಕ ಪ್ರತ್ಯುತ್ತರ‌ ನೀಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಈ ಪ್ರಯತ್ನ ಮಾಡುತ್ತಿರುವೆ. ಅನೇಕ ಸಂಸದ ಮಿತ್ರರು ಇದಕ್ಕೆ ಸಾಥ್ ನೀಡಿ ಈ ಬೇಡಿಕೆ ಮಂಡಿಸಿದ್ದರು. ಈ ಎಲ್ಲರ ಮನವಿಗೆ ಸ್ಪಂದಿಸಿದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ ಅವರು ಅವಧಿ ತಗ್ಗುವ ಈ ಕ್ರಮಕ್ಕೆ ಒಪ್ಪಿಗೆ ನೀಡಿದ್ದಾರೆ. ಅವರಿಗೆ ಸಾಕಷ್ಟು ಬಾರಿ ಮನವರಿಕೆ ಮಾಡಿ ಕೊಡುವ ಕೆಲಸ ‌ಮಾಡಿದ ಪ್ರತಿಫಲವಾಗಿ ಈ ಕಾರ್ಯ ಅನುಷ್ಠಾನಗೊಂಡಿದೆ. ಇದು ಕೇಂದ್ರ ಸರ್ಕಾರದ ಕೆಲಸ. ಇದನ್ನು ನಾನು ಮಾಡಿರುವೆ ಎಂದು ಹೇಳಿಕೊಂಡರೆ ಹೇಗೆ? ನೀವು ನಿಮ್ಮ ರಾಜ್ಯ ಸರ್ಕಾರ ವ್ಯಾಪ್ತಿಯಲ್ಲಿ ಬರುವ‌ ಕೆಲಸವನ್ನು ಮಾಡಿ ಎಂದು ಅವರು ಹೇಳಿದ್ದಾರೆ.
ವಂದೇ ಭಾರತ ರೈಲು ಬಿಡುಗಡೆ ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯ. ಈ ಬಗ್ಗೆ ಜ್ಞಾನವಿದ್ದರೂ ಈ ಬಾಲಿಷತನದ ಸವಾಲು ಹಾಕಿರುವುದು ಸಚಿವ ಡಾ.
ಎಂ.ಬಿ. ಪಾಟೀಲರಿಗೆ ಶೋಭೆ ತರುವಂತಹದ್ದಲ್ಲ. ಈ ರೈಲು ಗಂಟೆಗೆ ಪ್ರತಿ ಕಿ.ಮಿ. ೧೦೦ ವೇಗದಲ್ಲಿ ಓಡುತ್ತದೆ. ಅದಕ್ಕೆ ಪೂರಕವಾಗಿ ಇನ್ನೂ ಟ್ರ್ಯಾಕ್ ಸೆಟ್ಟಿಂಗ್ ಆಗಿಲ್ಲ. ಹೊಸ ಟ್ರ್ಯಾಕ್ ಇನ್ನೂ ಸೆಟಲ್ ಆಗಬೇಕು. ಅಲ್ಲಿಯವರೆಗೆ ಈ ರೈಲು ಸಂಚಾರ ಅಸಂಭವ, ಟ್ರ್ಯಾಕ್ ಸೆಟಲ್ ಆದ ನಂತರ ಖಂಡಿತವಾಗಿ ವಂದೇ ಭಾರತ ರೈಲು ಸಂಚಾರ ವಿಜಯಪುರಕ್ಕೂ ವಿಸ್ತರಣೆಯಾಗಲಿದೆ ಎಂದು ಅವರು ಹೇಳಿದ್ದಾರೆ.

Share this