ಪ್ರತಿಯೊಬ್ಬರ ಕೈಯಲ್ಲಿ ಒಂದು ಗಿಡ, ಪರಿಸರ ರಕ್ಷಣೆಗೆ ಸಂಕಲ್ಪ

‘ಒನ್ ಕೆಡೆಟ್ ಒನ್ ಟ್ರೀ’ ಅಭಿಯಾನಕ್ಕೆ ಕರ್ನಲ್ ವಂಶಿ ಕರೆ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 26 :
ಪರಿಸರ ಸಂರಕ್ಷಣೆ ಸರ್ಕಾರವೊಂದರ ಹೊಣೆಗಾರಿಕೆಯಲ್ಲ; ಪ್ರತಿಯೊಬ್ಬ ನಾಗರಿಕನೂ ತನ್ನ ಜವಾಬ್ದಾರಿಯನ್ನು ಅರಿತು ಗಿಡ ನೆಟ್ಟು, ಅದನ್ನು ಮರವಾಗಿ ಬೆಳೆಸುವ ಸಂಕಲ್ಪ ಮಾಡಬೇಕು ಎಂದು 36 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಕಮಾಂಡಿಂಗ್ ಆಫೀಸರ್ ಕರ್ನಲ್ ವಂಶಿ ಕರೆ ನೀಡಿದರು.
ನಗರದ ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯ ಹಾಗೂ ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಎನ್‌ಸಿಸಿ ಘಟಕಗಳು ಮತ್ತು 36 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಸಹಯೋಗದಲ್ಲಿ ಆಯೋಜಿಸಿದ್ದ ‘ಏಕ್ ಪೇಡ್ ಮಾ ಕೆ ನಾಮ್’ ಹಾಗೂ ‘ಒನ್ ಕೆಡೆಟ್ ಒನ್ ಟ್ರೀ’ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗಿಡ ನೆಡುವುದು ಒಂದು ದಿನದ ಕಾರ್ಯಕ್ರಮವಾಗಬಾರದು; ನೆಟ್ಟ ಗಿಡವನ್ನು ಪೋಷಿಸಿ, ಸಂರಕ್ಷಿಸಿ ಬೆಳೆಸುವುದೇ ನಿಜವಾದ ಪರಿಸರ ಸೇವೆ ಎಂದು ಅವರು ಹೇಳಿದರು.
‘ಒನ್ ಕೆಡೆಟ್ ಒನ್ ಟ್ರೀ’ ಅಭಿಯಾನವು ಪ್ರತಿಯೊಬ್ಬ ಕೆಡೆಟ್‌ನಲ್ಲೂ ಪರಿಸರದ ಮೇಲಿನ ಕಾಳಜಿ ಹಾಗೂ ಜವಾಬ್ದಾರಿಯ ಮನೋಭಾವ ಬೆಳೆಸುವ ಉದ್ದೇಶ ಹೊಂದಿದೆ. ಇಂದು ನೆಡುವ ಪ್ರತಿಯೊಂದು ಗಿಡವೂ ಮುಂದಿನ ಪೀಳಿಗೆಗೆ ಶುದ್ಧ ಗಾಳಿ, ನೆರಳು ಮತ್ತು ಹಸಿರು ಪರಿಸರ ನೀಡುವ ಅಮೂಲ್ಯ ಕೊಡುಗೆಯಾಗಲಿದೆ ಎಂದು ಕರ್ನಲ್ ವಂಶಿ ತಿಳಿಸಿದರು.
ಎನ್‌ಸಿಸಿ ಕೇವಲ ಶಿಸ್ತು ಮತ್ತು ನಾಯಕತ್ವ ತರಬೇತಿಗೆ ಸೀಮಿತವಾಗಿಲ್ಲ. ಸಾಮಾಜಿಕ ಹೊಣೆಗಾರಿಕೆ, ಪರಿಸರ ಕಾಳಜಿ ಹಾಗೂ ದೇಶಸೇವೆಯ ಮನೋಭಾವ ಬೆಳೆಸುವುದಕ್ಕೂ ಆದ್ಯತೆ ನೀಡಲಾಗುತ್ತಿದೆ. ಕೆಡೆಟ್‌ಗಳು ವಿವಿಧ ಸಮುದಾಯ ಸೇವೆ, ಸಾಮಾಜಿಕ ಜಾಗೃತಿ ಹಾಗೂ ಪರಿಸರ ಸಂರಕ್ಷಣಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಬಿ. ಕಮಾಟಿ, ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ.ಟಿ. ಶ್ರೀನಿವಾಸ್, 36 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಅಜಯ್ ಸಿಂಗ್, ಅಸೋಸಿಯೇಟ್ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಡಾ. ರಾಮಚಂದ್ರ ನಾಯಕ್ ಎಂ. ಸೇರಿದಂತೆ ಎನ್‌ಸಿಸಿ ಅಧಿಕಾರಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಕೆಡೆಟ್‌ಗಳು ಉಪಸ್ಥಿತರಿದ್ದರು.
ಇದೇ ವೇಳೆ ಕರ್ನಲ್ ಬಿ.ಕೆ.ಕೆ. ವಂಶಿ ಹಾಗೂ ಲೆಫ್ಟಿನೆಂಟ್ ಕರ್ನಲ್ ಅಜಯ್ ಸಿಂಗ್ ಅವರನ್ನು ಸನ್ಮಾನಿಸಲಾಯಿತು. ಬಳಿಕ ಗಣ್ಯರು ಹಾಗೂ ಎನ್‌ಸಿಸಿ ಅಧಿಕಾರಿಗಳು ಮತ್ತು ಕೆಡೆಟ್‌ಗಳು ಕಾಲೇಜು ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರುಣಿಸಿದರು.
‘ಒಂದು ಕೆಡೆಟ್–ಒಂದು ಗಿಡ’ ಎಂಬ ಸಂಕಲ್ಪದೊಂದಿಗೆ ನಡೆದ ಕಾರ್ಯಕ್ರಮವು, ಗಿಡ ನೆಡುವುದಷ್ಟೇ ಅಲ್ಲ; ಅದನ್ನು ಬೆಳೆಸಿ ಭವಿಷ್ಯಕ್ಕೆ ಹಸಿರು ಉಡುಗೊರೆ ನೀಡುವ ಸಂದೇಶ ಸಾರಿತು.

Share this