ಸಪ್ತಸಾಗರ ವಾರ್ತೆ,ವಿಜಯಪುರ, ಆ. 20:
“ಒಂದು ಛಾಯಾಚಿತ್ರ ಜಗತ್ತಿನ ಇತಿಹಾಸವನ್ನು ನೆನಪಿಸುವುದರ ಜತೆಗೆ, ಮಹತ್ವದ ದಾಖಲೆಯಾಗಿಯೂ ಉಳಿಯುತ್ತದೆ” ಎಂದು ಹಿರಿಯರಾದ ವಿದ್ಯಾಧರ ಸಾಲಿ ಹೇಳಿದರು.
ನಗರದ ಸರಕಾರಿ ಆರ್ಟ್ ಗ್ಯಾಲರಿಯಲ್ಲಿ ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ವತಿಯಿಂದ ಆಯೋಜಿಸಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಕಾಲದಲ್ಲಿ ಛಾಯಾಗ್ರಹಣ ವೃತ್ತಿಯಿಂದ ಜೀವನ ನಡೆಸುವುದು ಸವಾಲಿನ ಕೆಲಸವಾಗಿದೆ. ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಆಧುನಿಕ ಕ್ಯಾಮೆರಾಗಳನ್ನು ಖರೀದಿಸಿ, ಪರಸ್ಪರ ಸ್ಪರ್ಧೆ ಎದುರಿಸಬೇಕಾದ ಪರಿಸ್ಥಿತಿ ಇದೆ. ಹಿಂದಿನ ಕಾಲದ ಕಪ್ಪು-ಬಿಳುಪು ಛಾಯಾಚಿತ್ರಗಳಿಗೆ ವಿಶಿಷ್ಟವಾದ ಐತಿಹಾಸಿಕ ಮಹತ್ವವಿದ್ದು, ಇಂದಿನ ಛಾಯಾಗ್ರಹಣದಲ್ಲೂ ಆ ಇತಿಹಾಸ ಮತ್ತು ದಾಖಲೀಕರಣದ ಮಹತ್ವವನ್ನು ಉಳಿಸಿಕೊಳ್ಳಬೇಕು ಎಂದರು.
ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಕೇವಲ ಮೂರು ವರ್ಷಗಳಲ್ಲಿ ರಾಜ್ಯಮಟ್ಟದಲ್ಲಿ ಉತ್ತಮ ಸಂಘಟನೆಯಾಗಿ ಬೆಳೆದಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ಹಿರಿಯ ಛಾಯಾಗ್ರಾಹಕ ಹಾಗೂ ಕಲಾವಿದ ಬಿ.ಎಸ್. ಪಾಟೀಲ ಮಾತನಾಡಿ, ಡಿಜಿಟಲ್ ಯುಗಕ್ಕೂ ಮುನ್ನ ಛಾಯಾಗ್ರಹಣ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ. ಅದರಲ್ಲೂ ಕಲಾತ್ಮಕ ಹಾಗೂ ವನ್ಯಜೀವಿ ಛಾಯಾಗ್ರಹಣ ಅತ್ಯಂತ ಸವಾಲಿನದ್ದಾಗಿತ್ತು. ಆದರೆ ಇಂದು ಡಿಜಿಟಲ್ ತಂತ್ರಜ್ಞಾನದಿಂದ ಕ್ಷಣಾರ್ಧದಲ್ಲೇ ಉತ್ತಮ ಚಿತ್ರಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಹುದಾಗಿದೆ. ಕೆಲವೇ ಕ್ಷಣಗಳಲ್ಲಿ ಅಂತಹ ಚಿತ್ರಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವ ಸಾಧ್ಯತೆಯಿದೆ ಎಂದರು.
ಹಿರಿಯ ಕಲಾವಿದ ಎಂ.ಕೆ. ಪತ್ತಾರ, ಪ್ರವಾಸೋದ್ಯಮ ಇಲಾಖೆಯ ಅನಿಲಕುಮಾರ ಬನಜಿಗೇರ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ರಮೇಶ ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಛಾಯಾರತ್ನ ಪ್ರಶಸ್ತಿ ಪ್ರದಾನ
ಕಾರ್ಯಕ್ರಮದಲ್ಲಿ ಛಾಯಾರತ್ನ ಪ್ರಶಸ್ತಿಗೆ ಭಾಜನರಾದ ವಿಜಯಪುರದ ಗುರುರಾಜ ಔರಸಂಗ, ಉದಯಕುಮಾರ ಕುಲಕರ್ಣಿ, ಮಾಣಿಕಪ್ರಭು ಶಟಗಾರ, ಮಲ್ಲಿಕಾರ್ಜುನ ಗುಲಗಂಜಿ, ನಿಂಬರಗಿಯ ದೇವಾನಂದ ಸಿಂಗೆ, ತಿಕೋಟಾದ ದಯಾನಂದ ಪರಮಾಜ, ನಿಡಗುಂದಿಯ ಮಾನಪ್ಪ ಬಡಿಗೇರ, ಉಕ್ಕಲಿಯ ಅನಿಲ ಕಲ್ಯಾಣಿ ಹಾಗೂ ಮಸುತಿಯ ಲಕ್ಷ್ಮಣ ಹೊಸೂರ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಿಲ್ಲೆಯ ಛಾಯಾಗ್ರಾಹಕರ ಮಕ್ಕಳಾದ ಭವಾನಿ ನೇಜ, ವಿಜೇತಾ ಮಹಾಂತಮಠ, ಶಿವಾನಿ ನೇಜ, ಐಶ್ವರ್ಯ ಮಠಪತಿ, ಕುಮಾರ ಅಭಿಲಾಷ ನಾವಿ, ಸಂಪತ್ತ ಬಡಿಗೇರ, ಸುದರ್ಶನ ಉಪಾಧ್ಯ, ಸಚೀನ ಬಡಿಗೇರ ಹಾಗೂ ಅಭೀಷೇಕ ನಾವಿ ಅವರು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ಹಿನ್ನೆಲೆಯಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಛಾಯಾಗ್ರಾಹಕರಾದ ರಮೇಶ ಚವ್ಹಾಣ, ಸತೀಶ ಕಲಾಲ, ಶಶಿಕುಮಾರ ಕುಂಬಾರ ಹಾಗೂ ಮಲ್ಲಿಕಾರ್ಜುನ ಪಾರ್ವತಿ ಅವರ ಛಾಯಾಚಿತ್ರಗಳ ಪ್ರದರ್ಶನ ಕಲಾಸಕ್ತರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ 200ಕ್ಕೂ ಹೆಚ್ಚು ಛಾಯಾಗ್ರಾಹಕರು ಪಾಲ್ಗೊಂಡಿದ್ದರು. ಸಂಜೀವ ಜಮಾದಾರ, ಜಗಮೋಹನ ಉಪಾಧ್ಯೆ, ಶಿವರಾಜ ಕುಂಟೋಜಿ, ಶಿವಾನಂದ ಜಿಗಜಿವಣಗಿ, ಸಂಜಯ ರೇವೆ, ಆನಂದ ಮಹಾಂತಮಠ, ಸಂಗಮೇಶ ಬದಾಮಿ, ಮಹೇಶ ಕುಂಬಾರ, ಮಹಾಂತೇಶ ಪಾಟೀಲ, ಪಿ.ಎಸ್. ಕಡೇಮನಿ, ಸಂಗಯ್ಯ ಮಠಪತಿ, ಪಿಂಟು ರಜಪೂತ, ಸುರೇಶ ಗಲ್ಪಿ, ಮುರಾರಿ ಕರ್ವಾ, ಆರ್ಯನ್ ಹಿರೇದಸಾಯಿ, ವೀರೇಶ ಅಡಕಿ, ಸುಭಾಸ ಪವಾರ, ಪ್ರಶಾಂತ ಪಟ್ಟಣಶೆಟ್ಟಿ, ಸುರೇಶ ರಾಠೋಡ, ಪವನ ಅಂಗಡಿ, ಮೌನೇಶ ಬಡಿಗೇರ, ಗೌಡಪ್ಪಗೌಡ ಬಿರಾದಾರ, ಸಂತೋಷ ಹಂಜಗಿ, ಆಕಾಶ ಧೋರಕರ, ನಾಗಯ್ಯ ಗಣಾಚಾರಿ, ಶೇಖರ ಹರಕಂಗಿ, ಸುನೀಲ ಬಿರಾದಾರ, ಸಿದ್ದು ಹೊದ್ಲೂರ, ಶಕೀಲ, ಚಂದ್ರಕಾಂತ ವಡ್ಡರ, ಬಸವರಾಜ ವಾಲಿಕಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.


