ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 28:
ಕಾಖಂಡಕಿ ಗ್ರಾಮದ ಶ್ರೀ ಗುರುದೇವಾಶ್ರಮದಲ್ಲಿ ಪೂಜ್ಯ ಶ್ರೀ ಶಿವಯೋಗೀಶ್ವರ ಸ್ವಾಮೀಜಿಗಳ ದಿವ್ಯ ಮಾರ್ಗದರ್ಶನದಲ್ಲಿ ವಿವಿಧ ಕ್ಷೇತ್ರಗಳಿಂದ ಆಗಮಿಸಿದ ೨೦ ಶಿಬಿರಾರ್ಥಿಗಳಿಗೆ ಮೂರು ದಿನಗಳ ಆಧ್ಯಾತ್ಮಿಕ ಶಿಬಿರ ಯಶಸ್ವಿಯಾಗಿ ನೆರವೇರಿತು.
ಈ ಶಿಬಿರವು ಆಧ್ಯಾತ್ಮಿಕ ಜ್ಞಾನ ಮತ್ತು ಸಾಮಾಜಿಕ-ಪರಿಸರ ಜಾಗೃತಿಯನ್ನು ಒಟ್ಟುಗೂಡಿಸುವ ಉದ್ದೇಶದಿಂದ ನಡೆಯಿತು.
ಶಿಬಿರದ ಅವಧಿಯಲ್ಲಿ ಪೂಜ್ಯ ಶ್ರೀ ಶಿವಯೋಗೀಶ್ವರ ಸ್ವಾಮೀಜಿಗಳು ಪತಂಜಲಿ ಯೋಗ ಸೂತ್ರಗಳು ಕುರಿತು ಆಳವಾದ ಮಾರ್ಗದರ್ಶನ ನೀಡಿದರು. ಮನಸ್ಸಿನ ಶಿಸ್ತು, ಆತ್ಮಜ್ಞಾನ ಮತ್ತು ಆಂತರಿಕ ಶಾಂತಿಗೆ ದಾರಿ ಎಂಬ ವಿಷಯಗಳನ್ನು ವಿವರಿಸುವ ಜೊತೆಗೆ ವಚನ ಸಾಹಿತ್ಯ ಚಿಂತನೆ ಕುರಿತು ಸಾರ್ಥಕ ಚರ್ಚೆ ನಡೆಸಲಾಗಿದ್ದು, ವಚನಗಳ ತಾತ್ವಿಕ ಮೌಲ್ಯಗಳು ಮತ್ತು ಇಂದಿನ ಜೀವನದಲ್ಲಿ ಅವುಗಳ ಪ್ರಾಸಂಗಿಕತೆಯನ್ನು ಶಿಬಿರಾರ್ಥಿಗಳಿಗೆ ಮನವರಿಕೆ ಮಾಡಲಾಯಿತು.
ಆಧ್ಯಾತ್ಮಿಕ ಉಪನ್ಯಾಸಗಳ ಜೊತೆಗೆ ಶಿಬಿರದಲ್ಲಿ ಪರಿಸರ ಸಂರಕ್ಷಣೆಗೆ ವಿಶೇಷ ಮಹತ್ವ ನೀಡಲಾಯಿತು. ಪ್ಲಾಸ್ಟಿಕ್ ಬಳಕೆಯಿಂದಾಗುವ ಹಾನಿಗಳ ಕುರಿತು ಶಿಬಿರಾರ್ಥಿಗಳು ಚಿಂತನೆ ನಡೆಸಿದರು. ದಿನನಿತ್ಯದ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಮಾರ್ಗಗಳ ಕುರಿತು ಚರ್ಚಿಸಲಾಯಿತು.
ಪ್ಲಾಸ್ಟಿಕ್ ಚೀಲಗಳ ಬದಲು ಬಟ್ಟೆಯ ಚೀಲಗಳನ್ನು ಬಳಸುವುದು, ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಗಳ ಬದಲು ಸ್ಟೀಲ್ ನೀರಿನ ಬಾಟಲಿಗಳನ್ನು ಬಳಸುವುದು ಸೇರಿದಂತೆ ಪರಿಸರ ಸ್ನೇಹಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವಂತೆ ಸ್ವಾಮೀಜಿಗಳು ಶಿಬಿರಾರ್ಥಿಗಳಿಗೆ ಪ್ರೇರಣೆ ನೀಡಿದರು. ಜೊತೆಗೆ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನೂ ಪ್ರತಿಯೊಬ್ಬರೂ ವಹಿಸಿಕೊಳ್ಳಬೇಕೆಂದು ಕರೆ ನೀಡಿದರು.
ಶಿಬಿರದಲ್ಲಿ ಶ್ರೀ ಶಂಭುಲಿಂಗಯ್ಯ ಕರ್ಪೂರಮಠ, ಶಿವಶರಣ ಹುಣಸಗಿ, ಸುಭಾಸ ಕಮತೆ, ಶಿವಕುಮಾರ ಉಮದಿ ಮತ್ತಿತರರು ಭಾಗವಹಿಸಿದ್ದರು.
ಈ ಮೂರು ದಿನಗಳ ಆಧ್ಯಾತ್ಮಿಕ ಶಿಬಿರವು ಶಿಬಿರಾರ್ಥಿಗಳಿಗೆ ಆಂತರಿಕ ಶಾಂತಿ, ಆತ್ಮವಿಕಾಸ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಜವಾಬ್ದಾರಿಯ ಭಾವನೆ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿತು. ಶಿಬಿರದ ಅಂತ್ಯದಲ್ಲಿ ಪಡೆದ ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮತ್ತು ಪರಿಸರ ಸ್ನೇಹಿ ಜೀವನಶೈಲಿಯನ್ನು ಅನುಸರಿಸುವ ಸಂಕಲ್ಪದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ಕಾಖಂಡಕಿ ಶ್ರೀ ಗುರುದೇವಾಶ್ರಮದಲ್ಲಿ ಮೂರು ದಿನಗಳ ಆಧ್ಯಾತ್ಮಿಕ ಶಿಬಿರ ಯಶಸ್ವಿ


