ಹೊರ್ತಿ ಗ್ರಾಮದ ಶಿವ ದೇವಾಲಯಕ್ಕೆಸ್ವಚ್ಚತೆಯ ಸ್ಪರ್ಶ

ಸಪ್ತಸಾಗರ ವಾರ್ತೆ, ವಿಜಯಪುರ 25. ಶತಮಾನಗಳ ಪರಂಪರೆಯ ಹೊರ್ತಿ ಗ್ರಾಮದ ಶಿವ ದೇವಾಲಯಕ್ಕೆ
ಸ್ವಚ್ಚತೆಯ ಸ್ಪರ್ಶ ನೀಡಿದ ಗಾನಯೋಗಿ ಸಂಘದ ಸದಸ್ಯರು ಮತ್ತು ಸ್ಥಳೀಯರ ಕಾರ್ಯಕ್ಕೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಗ್ರಾಮದಲ್ಲಿರುವ ಕ್ರಿ. ಶ. 11ನೇ ಶತಮಾನದ ಚಾಲುಕ್ಯರ ಕಾಲದ ಅಪರೂಪದ ಪ್ರಾಚೀನ ಶಿವ ದೇವಾಲಯವನ್ನು ಗಾನಯೋಗಿ ಸಂಘದ ಸದಸ್ಯರು, ಪದಾಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು ಶುಕ್ರವಾರ ಸ್ವಚ್ಛಗೊಳಿಸಿದ್ದರು. ಎಲ್ಲರೂ ಒಗ್ಗಟ್ಟಿನಿಂದ ಸ್ವಚ್ಚಗೊಳಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ.
ಇಂತಹ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಸ್ಮಾರಕಗಳನ್ನು ಸಂರಕ್ಷಿಸುವ ಜವಾಬ್ದಾರಿ ಸರಕಾರದೊಂದಿಗೆ ಸಮಾಜದ ಮೇಲೆಯೂ ಇದೆ. ಈ ಸಂಘವು ತೋರಿದ ಕಾರ್ಯ ಇತರ ಸಂಘಟನೆಗಳಿಗೆ ಮಾದರಿಯಾಗಿದೆ.
ಗಾನಯೋಗಿ ಸಂಘವು ಸೇವಾ ಕಾರ್ಯಗಳನ್ನು ಮಾಡುತ್ತಿರುವುದು ಅಭಿನಂದನಾರ್ಹವಾಗಿದೆ. ಈ ಕಾರ್ಯಕ್ಕೆ ಕೈ ಜೋಡಿಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ ಸಚಿವ ಎಂ. ಬಿ. ಪಾಟೀಲ‌ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

Share this