ಸಪ್ತಸಾಗರ ವಾರ್ತೆ ವಿಜಯಪುರ, ಜ. 16: ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಣಿಯ ಕಾಗಿನೆಲೆ ಗುರುಪೀಠದ ಶ್ರೀ ಸಿದ್ಧರಾಮಾನಂದ ಪುರಿ ಮಹಾಸ್ವಾಮಿಗಳ ಅಕಾಲಿಕ ನಿಧನ ನಾಡಿನ ಲಕ್ಷಾಂತರ ಭಕ್ತರಿಗೆ ಬರಸಿಡಿಲು ಬಡಿದಂತಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಅಭಿಪ್ರಾಯಪಟ್ಟರು.
ಶುಕ್ರವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಶ್ರೀಗಳ ನುಡಿನಮನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಪಾರ ಭಕ್ತ ಸಮೂಹವನ್ನು ಹೊಂದಿದ ಕಾಗಿನೆಲೆ ಗುರುಪೀಠ ಮಹಾಸಂಸ್ಥಾನ ಕಲಬುರ್ಗಿ ವಿಭಾಗದ ಶಾಖಾಮಠದ ಸ್ವಾಮೀಜಿಗಳಾಗಿದ್ದು, ತಮ್ಮ 18ನೇ ವಯಸ್ಸಿನಲ್ಲಿಯೇ ಮನೆ ತೊರೆದಿದ್ದ, ಶ್ರೀಗಳು ಮುರುಘಾಮಠಕ್ಕೆ ಹೋಗಿ ಭಕ್ತಿಮಾರ್ಗದ ಮೊರೆ ಹೋಗಿದ್ದರು ಎಂದರು.
ನುಡಿನಮನ ಕಾರ್ಯಕ್ರಮವನ್ನು ಉದ್ದೇಶಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ಮಾತನಾಡಿ, ಇಡೀ ನಾಡಿನಾದ್ಯಂತ ಹಾಲುಮತ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಮೂಲಕ ಮನೆ ಮಾತಾಗಿದ್ದ ಶ್ರೀಗಳು ಭಾರತದಾದ್ಯಂತ ಇರುವ ಬುಡಕಟ್ಟು ಸಮುದಾಯಗಳ ಒಗ್ಗೂಡಿಕೆ ಮತ್ತು ಸಮ್ಮಿಲನ ಮಾಡಿಸಿದ ಶ್ರೀಗಳ ಅಗಲಿಕೆ ಇಡೀ ನಾಡಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಅಪಾರ ಭಕ್ತ ವೃಂದವನ್ನು ಬಿಟ್ಟು ಅಗಲಿದ ಶ್ರೀಗಳ ಪವಿತ್ರ ಆತ್ಮಕ್ಕೆ ಚಿರಶಾಂತಿ ಸಿಗಲಿ ಭಕ್ತಕುಲಕೋಟಿಗೆ ದು:ಖ ಸಹಿಸುವ ಶಕ್ತಿ ಭಗವಂತ ನೀಡಲೆಂದು ನುಡಿನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ನಗರ ಘಟಕದ ಅಧ್ಯಕ್ಷ ಜಗದೀಶ ಬೋಳಸೂರ, ಗೌರವ ಕಾರ್ಯದರ್ಶಿ ರಿಯಾಜ ಪಿಂಜಾರ, ಸುಖದೇವಿ ಅಲಬಾಳಮಠ, ವಿದ್ಯಾನಂದ ಬಸರಗಿ, ಲಿಯಾಕತ್ ಅಲಿ, ಯಮನಪ್ಪ ಪವಾರ, ಸಂಜೀವ ಕುಲಕರ್ಣಿ, ಡಾ.ಆನಂದ ಕುಲಕರ್ಣಿ, ಮಹಾಂತೇಶ ಮಮದಾಪೂರ, ಪ್ರದೀಪ ನಾಯ್ಕೋಡಿ ಮುಂತಾದವರು ಉಪಸ್ಥಿತರಿದ್ದರು.
ಶ್ರೀ ಸಿದ್ಧರಾಮಾನಂದ ಮಹಾಸ್ವಾಮಿಗಳಿಗೆ ಕಸಾಪದಲ್ಲಿ ನುಡಿನಮನ


