ಪೆಟ್ರೋಲ್, ಡೀಸೆಲ್ , ಸಿ.ಎನ್.ಜಿ ಮತ್ತು ಎಲ್‌ಪಿಜಿ ದರ ಕಡಿತಕ್ಕೆ ಆಮ್ ಆದ್ಮಿಆಗ್ರಹ

ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 27:
ಪೆಟ್ರೋಲ್, ಡೀಸೆಲ್ , ಸಿ.ಎನ್.ಜಿ ಮತ್ತು ಎಲ್‌ಪಿಜಿ ದರಗಳ ಸತತ ಹೆಚ್ಚಳವನ್ನು ವಿಜಯಪುರ ಜಿಲ್ಲಾ ಆಮ್ ಆದ್ಮಿ ಪಾರ್ಟಿ ತೀವ್ರವಾಗಿ ಖಂಡಿಸಿ, ದರಗಳನ್ನು ತಕ್ಷಣ ಕಡಿತಗೊಳಿಸುವಂತೆ ಪ್ರಧಾನ ಮಂತ್ರಿಗಳಿಗೆ ಜಿಲ್ಲಾಧಿಕಾರಿ ಡಾ. ಆನಂದ ಮೂಲಕ ಮನವಿ ಮಾಡಿದೆ.
ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ ಸೋಲಾಪುರ ಮಾಧ್ಯಮದವರೊಂದಿಗೆ ಮಾತನಾಡಿ, “ಈ ಅನಪೇಕ್ಷಿತ ಬೆಲೆ ಏರಿಕೆಯು ಸಾಮಾನ್ಯ ಜನರ ಜೀವನದ ಮೇಲೆ ಭಾರಿ ಹೊರೆಯನ್ನು ಹೇರಿದೆ ಎಂದು ಆಮ್ ಆದ್ಮಿ ಪಾರ್ಟಿ ಅಭಿಪ್ರಾಯಪಟ್ಟಿದೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಈ ಸಂಬಂಧ ಮನವಿ ಪತ್ರ ಸಲ್ಲಿಸುವ ಮೂಲಕ ಪಾರ್ಟಿ ಈ ವಿಷಯವನ್ನು ಗಂಭೀರವಾಗಿ ಎತ್ತಿ ಹಿಡಿದಿದೆ ಎಂದು ಅವರು ಹೇಳಿದರು.
“ಈ ಬೆಲೆ ಏರಿಕೆಯ ಪರಿಣಾಮಗಳು ತುಂಬಾ ಅಪಾಯಕಾರಿವಾಗಿದ್ದು ಜನರ ಮೇಲೆ ಬರೆ ಏಳದಂತಾಗಿದೆ.
ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದ ರಸ್ತೆ ಸಾರಿಗೆ ವೆಚ್ಚ ಹೆಚ್ಚಾಗುತ್ತದೆ. ಅದರ ಜೊತೆಗೆ ಎಲ್ಲಾ ನಿತ್ಯಾವಶ್ಯಕ ವಸ್ತುಗಳ ಬೆಲೆ ಕೂಡ ಏರಿಕೆಯಾಗುತ್ತವೆ. ಕೃಷಿ, ಸಾರಿಗೆ ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರುತ್ತದೆ.
ಮಧ್ಯಮ ವರ್ಗ ಮತ್ತು ಬಡವರ ಕುಟುಂಬಗಳ ಆರ್ಥಿಕ ಸ್ಥಿತಿ ಅಂತೂ ತೀವ್ರವಾಗಿ ಹದಗೆಡುತ್ತಿದೆ. ದೇಶದ ಆರ್ಥಿಕತೆಗೆ ದೀರ್ಘಕಾಲೀನ ನಷ್ಟವೂ ಕೂಡ ಆಗುತ್ತಿದೆ ಎಂದು ಭೋಗೇಶ ಸೋಲಾಪುರ ತಮ್ಮ ಅಸಮಾಧಾನವನ್ನು ಹೊರಹಾಕಿದರು.
ಈಗಾಗಲೇ ಜನಸಾಮಾನ್ಯರು ತೀವ್ರ ಆರ್ಥಿಕ ಒತ್ತಡದಲ್ಲಿರುವ ಸಂದರ್ಭದಲ್ಲಿ ಈ ಬೆಲೆ ಏರಿಕೆಯು ಅಸಹನೀಯವಾಗಿದೆ ಎಂದು ಸೋಲಾಪುರ ಹೇಳಿದರು.
ಪೆಟ್ರೋಲ್, ಡೀಸೆಲ್, ಸಿ.ಎನ್.ಜಿ ಮತ್ತು ಎಲ್‌ಪಿಜಿ ದರಗಳನ್ನು ತಕ್ಷಣ ಕಡಿತಗೊಳಿಸುವುದು.
ಕೇಂದ್ರ ಸರ್ಕಾರದ ಪೆಟ್ರೊಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡುವುದು. ಸಾಮಾನ್ಯ ಜನರ ಜೀವನ ನಿರ್ವಹಣೆಯನ್ನು ಸುಲಭಗೊಳಿಸುವ ನೀತಿಗಳನ್ನು ಜಾರಿಗೊಳಿಸುವುದು.
ಕೇಂದ್ರ ಸರ್ಕಾರವು ಜನಸಾಮಾನ್ಯರ ಹಿತವನ್ನು ಗಮನದಲ್ಲಿಟ್ಟುಕೊಂಡು ಈ ಬೆಲೆ ಏರಿಕೆಯನ್ನು ತಕ್ಷಣ ತಡೆಯಬೇಕು. ಇಲ್ಲವಾದರೆ ಜನರು ಈ ಅನ್ಯಾಯವನ್ನು ಸಹಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾ ಘಟಕವು ಈ ವಿಷಯದಲ್ಲಿ ಜನರೊಂದಿಗೆ ನಿಂತು ಸತತ ಹೋರಾಟ ನಡೆಸುವುದಾಗಿ ಘೋಷಿಸಿದೆ ಎಂದವರು ಹೇಳಿದರು.

Share this