ಅವೈಜ್ಞಾನಿಕ ಮೀಸಲಾತಿ ಕೈಬಿಡಿ, ಎಲ್ಲರಿಗೂ ಸಮಾನ ಮೀಸಲಾತಿ ನೀಡಿ

ಸಪ್ತಸಾಗರ ವಾರ್ತೆ ವಿಜಯಪುರ, ಆ. 30 :
ಒಳಮೀಸಲಾತಿ ವರ್ಗೀಕರಣ ಅವೈಜ್ಞಾನಿಕವಾಗಿದೆ. ಅವೈಜ್ಞಾನಿಕ ಒಳಮೀಸಲಾತಿ ರದ್ದುಗೊಳಿಸಿ, ಕಲ್ಪಿಸುವುದಾದರೆ ಎಲ್ಲರಿಗೂ ಸಮಾನವಾಗಿ ಮೀಸಲಾತಿ ನೀಡಿ ಎಂದು ಬಂಜಾರಾ, ಕೊರಚ, ಕೊರಮ, ಭೋವಿ ಸಮುದಾಯದ ಮುಖಂಡರು ಸರ್ಕಾರಕ್ಕೆ ಒತ್ತಾಯಿಸಿದರು.
ವಿವಿಧ ಸಮಾಜ ಮುಖಂಡರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರಕ್ಕೆ ಒತ್ತಾಯಿಸಿದರು.
ಈ ಎಲ್ಲ ಸಂದೇಶವನ್ನು ಸರ್ಕಾರಕ್ಕೆ ತಲುಪಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ ೧೦ ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂಬ ಮಾಹಿತಿಯನ್ನು ತಿಳಿಸಿದರು.
ಮಾಜಿ ಶಾಸಕ ಮನೋಹರ ಐನಾಪೂರ, ಸ್ಪೃಶ್ಯ, ಅಸ್ಪೃಶ್ಯ ಎಂಬ ಬೇರ್ಪಡಿಸುವಿಕೆಯೇ ಸಂವಿಧಾನದಲ್ಲಿ ಇಲ್ಲ. ಆದರೆ ಆಳುವ ಸರ್ಕಾರಗಳು ಸ್ಪೃಶ್ಯ, ಅಸ್ಪೃಶ್ಯ ಎಂಬ ಬೇಧ ಸೃಜಿಸಿ ಭಾರತೀಯ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೋಷಪೂರಿತ ದತ್ತಾಂಶವನ್ನು ಪರಿಗಣಿಸಿ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಅವೈಜ್ಞಾನಿಕವಾಗಿ ವರ್ಗೀಕರಣ ಮಾಡಿರುವ ಕ್ರಮದಿಂದ ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ ಎಂದರು.
ರಾಜ್ಯ ಸರ್ಕಾರಗಳು ಮಾಡಬಹುದಾದ ಮೀಸಲಾತಿ ವರ್ಗೀಕರಣ ಪ್ರಕ್ರಿಯೆಯು ನ್ಯಾಯಾಲಯದ ಪರಾಮರ್ಶೆಗೆ ಒಳಪಡಲಿದೆ ಎಂಬುದನ್ನು ಸರ್ವೋಚ್ಚ ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯ ನಿರ್ದೇಶನ ನೀಡಿರುವ ಈ ಎಲ್ಲಾ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿರುವುದು ರಾಜ್ಯ ಸರ್ಕಾರದ ಕರ್ತವ್ಯ. ಆದರೆ ಸರ್ಕಾರ ಈ ನಿಯಮವನ್ನು ಪಾಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಮಹೇಂದ್ರ ನಾಯಕ ಮಾತನಾಡಿ, ಇದೊಂದು ಅವೈಜ್ಞಾನಿಕ ಸಮೀಕ್ಷೆ, ತಾಂಡಾದ ಜನರು ದೀಪಾವಳಿಗೆ ಮಾತ್ರ ಊರಿಗೆ ಬರುತ್ತಾರೆ. ಬಾಕಿ ಸಮಯದಲ್ಲಿ ಬಡತನದಿಂದಾಗಿ ಗುಳೇ ಹೋಗುತ್ತಾರೆ. ಅವರು ಗುಳೇ ಹೋದ ಸಮಯದಲ್ಲಿ ಸಮೀಕ್ಷೆ ನಡೆಸುವುದು ಅವೈಜ್ಞಾನಿಕ ಅಲ್ಲದೇ ಮತ್ತೇನು? ನಮ್ಮ ಎಲ್ಲ ಜನಪ್ರತಿನಿಧಿಗಳು ಈ ವಿಷಯದಲ್ಲಿ ಒಂದಾಗಿದ್ದಾರೆ ಎಂದರು.
ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ಈ ವಿಷಯವಾಗಿ ಮುಖ್ಯಮಂತ್ರಿಗಳನ್ನು ಸಮಾಜದ ಮುಖಂಡರೊಂದಿಗೆ ಭೇಟಿ ಮಾಡಲು ಸಮಯ ಅವರು ಕೋರಿದ್ದರು. ಆದರೆ ಅವರಿಗೆ ಸಮಯವೇ ಸಿಗಲಿಲ್ಲ. ಹೀಗಾದರೆ ಯಾರಿಗೆ ನಮ್ಮ ನೋವು ಹೇಳಬೇಕು ಎಂದರು.
ಇನ್ನೂ ಪ್ರಕಾಶ ರಾಠೋಡ ಅವರು ಈಗ ಅಧಿಕಾರದಲ್ಲಿಲ್ಲ. ಆದರೂ ಈ ಹೋರಾಟದ ಜೊತೆ ನಮ್ಮೊಂದಿಗೆ ಇದ್ದಾರೆ ಎಂದರು.
ತಾಂಡಾಗಳಲ್ಲಿ ವಾಸಿಸುವ ಲಂಬಾಣಿ ಸಮುದಾಯದವರು. ನೆಲೆ ಇಲ್ಲದ ಸ್ಥಳಗಳಲ್ಲಿ ಕಲ್ಲು ಒಡೆದು ಜೀವಿಸುವ ಭೋವಿ ಸಮುದಾಯದವರು, ಇರಲು ಸೂರುಗಳೇ ಇಲ್ಲದ ಕೊರಚ, ಕೊರಮ ಊರೂರು ತಿರುಗುವ ಅಲೆಮಾರಿ ಸಮುದಾಯದವರು. ಈ ಎಲ್ಲರಿಗೆ ಅವೈಜ್ಞಾನಿಕ ಒಳ ಮೀಸಲಾತಿಯ ಪ್ರಮಾಣದಿಂದ ದೊಡ್ಡ ಅನ್ಯಾಯವಾಗಿದೆ. ಅದೇ ರೀತಿ ಎಡಗೈ ಹಾಗೂ ಬಲಗೈ ಸಮುದಾಯಗಳಿಗೂ ಗೊಂದಲವನ್ನು ಸೃಷ್ಟಿ ಮಾಡಲಾಗಿದೆ ಎಂದು ಅನೇಕ ಮುಖಂಡರು ಒತ್ತಾಯಿಸಿದರು.
ಕೆಸರಟ್ಟಿಯ ಶ್ರೀ ಸೋಮಲಿಂಗ ಸ್ವಾಮೀಜಿ ಮಾತನಾಡಿ, ಈ ಹಿಂದೆ ಇದೇ ರೀತಿಯ ದುಸ್ಸಾಹಸಕ್ಕೆ ಬಿಜೆಪಿ ಕೈ ಹಾಕಿತ್ತು. ಆಗ ಬಿಜೆಪಿ ಹಠಾವೋ – ತಾಂಡಾ ಬಚಾವೋ ನಡೆಸಿ ಬಿಜೆಪಿಗೆ ತಕ್ಕ ಪಾಠ ಕಲಿಸಲಾಗಿತ್ತು. ಈಗ ಕಾಂಗ್ರೆಸ್ ಸಹ ಇದೇ ರೀತಿ ವರ್ತನೆ ಮಾಡುತ್ತಿದೆ. ಈ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯದೇ ಹೋದರೆ ಆ ಪಕ್ಷಕ್ಕೂ ತಕ್ಕ ಪಾಠ ಕಲಿಸಲಾಗುವುದು. ನಾವು ಯಾರ ಹಕ್ಕನ್ನು ಕಸಿದುಕೊಳ್ಳುತ್ತಿಲ್ಲ. ಬದಲಾಗಿ ಎಲ್ಲರಿಗೂ ಸರಿಸಮಾನವಾದ ನ್ಯಾಯ ಕೊಡಿ ಎಂದಷ್ಟೇ ಕೇಳುತ್ತಿದ್ದೇವೆ ಎಂದರು.
ಈ ಒಳಮೀಸಲಾತಿ ಜಾರಿಗೊಳಿಸುವ ಮುನ್ನ ಪುನರ್ ಪರೀಶೀಲನೆ ಮಾಡುವುದು, ರಾಜ್ಯವ್ಯಾಪಿ ಪ್ರವಾಸ ಮಾಡಿ ಎಲ್ಲಾ ತಾಂಡ, ತಾಲ್ಲೂಕು, ಜಿಲ್ಲೆಗಳ ಸಮುದಾಯಗಳ ಮಾಹಿತಿಯನ್ನು ಪಡೆಯುವುದರೊಂದಿಗೆ ಎಲ್ಲ ಪರಿಶಿಷ್ಟ ಜಾತಿಗಳ ಜನಪ್ರತಿನಿಧಿಗಳ, ತಜ್ಞರನ್ನು ಆಹ್ವಾನಿಸಿ ಅಹವಾಲು ಸ್ವೀಕರಿಸುವುದು, ಮೀಸಲಾತಿ ವರ್ಗೀಕರಣ ಕುರಿತ ಸುಪ್ರೀಂ ಕೋರ್ಟಿನ ಆದೇಶದಂತೆ ಸೂಕ್ತ ಮಾನದಂಡಗಳನ್ನು ರೂಪಿಸಬೇಕು. ಜಾತಿವಾರು ಸ್ಥಿತಿಗತಿಗಳ ಸಮೀಕ್ಷೆ ಹಾಗೂ ಗಣತಿ ನಡೆಸಬೇಕು. ಈ ಎಲ್ಲ ಬಂಜಾರಾ, ಭೋವಿ ಎಲ್ಲ ಸಮುದಾಯಗಳಿಗೆ ಶೇ.೭ ಪ್ರಮಾಣದಲ್ಲಿ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಡಾ.ದೇವಾನಂದ ಚವ್ಹಾಣ, ಶ್ರೀ ಸಂಜೀವ ಮಹಾರಾಜರು, ಮುಖಂಡರಾದ ಡಿ.ಎಲ್. ಚವ್ಹಾಣ, ಅನುಸೂಯಾ ಜಾಧವ, ಸುರೇಶ ಬಿಜಾಪೂರ, ರಾಜು ಜಾಧವ, ಪ್ರಕಾಶ ಚವ್ಹಾಣ, ಮಲ್ಲಿಕಾರ್ಜುನ ನಾಯಕ, ಸಂತೋಷ ನಾಯಕ, ಆರ್.ಬಿ. ನಾಯಕ, ರಾಮು ಅಂಕಲಗಿ, ಅಬ್ದುಲ್ ಕುಂಚಿಕೊರವರ, ಈರಪ್ಪ ಕೊರಮ, ಕೆರಚಪ್ಪ ಕುಂಚಿಕೊರವರ, ಗಿರಿಮಲ್ಲಪ್ಪ ಭಜಂತ್ರಿ, ಶಿವು ಭಜಂತ್ರಿ, ಮಲ್ಲು ಭಜಂತ್ರಿ, ಪ್ರವೀಣ ಚವ್ಹಾಣ, ಸುರೇಶ ಪವಾರ, ರವಿ ರಾಠೋಡ, ಡಾ.ಅರವಿಂದ ಲಮಾಣಿ, ರಾಜಕುಮಾರ ರಾಠೋಡ, ಸಂತೋಷ ನಾಯಕ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Share