ಸಪ್ತಸಾಗರ ವಾರ್ತೆ, ಬಸವನಬಾಗೇವಾಡಿ, ಆ. 22:
ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರ, ಅರ್ಹ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳುವಂತೆ ಆಗ್ರಹಿಸಿ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಬಸವೇಶ್ವರ ವೃತ್ತದ ವರೆಗೆ ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಅನಂತರ ಬಸವನ ಬಾಗೇವಾಡಿ ತಹಸೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಅಡಿಯಲ್ಲಿ ಬರುವ 432 ಪದವಿ ಕಾಲೇಜುಗಳಲ್ಲಿ 6,000 ಕಾಯಂ ಉಪನ್ಯಾಸಕರಲ್ಲಿ 3000 ಕ್ಕಿಂತ ಹೆಚ್ಚು ಉಪನ್ಯಾಸಕರು ಈಗಾಗಲೇ ನಿವೃತ್ತಿ ಪಡೆದಿದ್ದು, ಇನ್ನು ಕೇವಲ 3000 ಖಾಯಂ ಉಪನ್ಯಾಸಕರೊಂದಿಗೆ 12,000 ಅತಿಥಿ ಉಪನ್ಯಾಸಕರ ಸೇವಾ ನೆರವಿನಿಂದ ಪದವಿ ತರಗತಿಗಳು ಜರುಗುತ್ತಿವೆ. ಕರ್ನಾಟಕದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಪಡೆಯುವುದು ವಿದ್ಯಾರ್ಥಿಗಳ ಹಕ್ಕು ಮುಂದುವರೆದು ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ಆದರೆ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮರೆತಂತಿರುವ ರಾಜ್ಯ ಸರ್ಕಾರ ಪದವಿ ಹಂತದಲ್ಲಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಖಾಯಂ ಉಪನ್ಯಾಸಕರ, ಅರ್ಹ ಉಪನ್ಯಾಸಕರ ನೇಮಕಾತಿಯಲ್ಲಿ ದೃಢವಾದ ನಿಲುವು ತೆಗೆದುಕೊಳ್ಳದಿರುವುದು ಕಳವಳಕಾರಿಯಾದ ಸಂಗತಿಯಾಗಿದೆ.
2025-26 ನೇ ಸಾಲಿನಲ್ಲಿ ಖಾಲಿ ಇರುವ 12,000 ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು 55,000 ಅರ್ಜಿಗಳು ಸಲ್ಲಿಕೆ ಆಗಿರುತ್ತವೆ. ಈಗಾಗಲೇ ನಮ್ಮ ಎಲ್ಲಾ ವಿಶ್ವವಿದ್ಯಾಲಯಗಳ ತರಗತಿಗಳು ಪ್ರಾರಂಭವಾಗಿ ತಿಂಗಳು ಕಳೆದರೂ ಸಹಿತ ಇಲ್ಲಿಯವರೆಗೆ ಅತಿಥಿ ಉಪನ್ಯಾಸಕರ ನೇಮಕಾತಿ ಆಗದೆ ಇರುವ ಕಾರಣ ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯ ತರಗತಿಗಳು ನಡೆಯುತ್ತಿಲ್ಲ, ರಾಜ್ಯದ ಪದವಿ ಕಾಲೇಜುಗಳಿಗೆ ಖಾಯಂ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳುವಷ್ಟು ಯೋಗ್ಯತೆ ರಾಜ್ಯ ಸರ್ಕಾರಕ್ಕೆ ಇಲ್ಲದಿದ್ದರೂ ಕನಿಷ್ಠಪಕ್ಷ ಅರ್ಹ ಅತಿಥಿ ಉಪನ್ಯಾಸಕರ ನೇಮಕಾತಿಗೆ ತತಕ್ಷಣ ಕ್ರಮ ವಹಿಸಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ ಎಂದರು.
ಎಬಿವಿಪಿಯ ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷ ನಾಯಕ ಮಾತನಾಡಿ, ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಬಡ-ಮಾಧ್ಯಮ ವರ್ಗದ ಅಥವಾ ಕೂಲಿ ಕಾರ್ಮಿಕರ ಮಕ್ಕಳು, ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಸುಧಾರಣೆಗೆ ಸರಕಾರಿ ಪದವಿ ಕ್ಯಾಂಪಸ್ ಗಳಲ್ಲಿ ಸಮರ್ಪಕ ಗುಣಮಟ್ಟದ ಶಿಕ್ಷಣ ನೀಡುವುದು ಕಾಲೇಜು ಶಿಕ್ಷಣ ಇಲಾಖೆ ಹಾಗೂ ಸರ್ಕಾರಗಳ ಜವಾಬ್ದಾರಿ ಆಗಿರುತ್ತದೆ. ಒಟ್ಟಾರೆಯಾಗಿ ಗಮನಿಸುವುದಾದರೆ, ರಾಜ್ಯದ ಪದವಿ ಕಾಲೇಜುಗಳಲ್ಲಿ ಕಾಯಂ ಪ್ರಾಂಶುಪಾಲರ ನೇಮಕಾತಿ ಇಲ್ಲದೆ, ಕಾಯಂ ಉಪನ್ಯಾಸಕರ ನೇಮಕಾತಿ ಇಲ್ಲದೆ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಹೀಗಾಗಿ ಶೀಘ್ರದಲ್ಲಿ ಕನಿಷ್ಠಪಕ್ಷ ಅರ್ಹ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡುವಂತೆ ಆಗ್ರಹಿಸಿದರು.
ಪದವಿ ಶಿಕ್ಷಣವನ್ನು ಬಲಪಡಿಸಿ, ಶೈಕ್ಷಣಿಕ ಕ್ಷೇತ್ರವನ್ನು ಆದ್ಯತಾ ವಲಯವೆಂದು ಪರಿಗಣಿಸಿ , ಅಗತ್ಯ ಕ್ರಮಗಳನ್ನು ಕೈಗೊಂಡು ರಾಜ್ಯದ ವಿದ್ಯಾರ್ಥಿಗಳ ಹಿತ ಕಾಯಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅಗ್ರಹಿಸುತ್ತದೆ ಎಂದರು.
ನಗರ ಕಾರ್ಯದರ್ಶಿ ಆದರ್ಶ ನಾಯಕ, ಮೋಹನ ಚವ್ಹಾಣ, ಸುಪ್ರೀತಾ, ಪ್ರಿಯಾಂಕ, ವಿಕಾಸ ಹಾಗೂ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬಸವನ ಬಾಗೇವಾಡಿಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ


