ಕ್ರೀಡೆಗಳಲ್ಲಿ ಸೋಲು ಗೆಲವು ಸಮಾನವಾಗಿ ಸ್ವೀಕರಿಸಿ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 1:
ಕ್ರೀಡಾಪಟುಗಳು ಸೋಲು ಮತ್ತು ಗೆಲವುಗಳನ್ನು ಸಮನಾಗಿ ಸ್ವಿಕರಿಸಿ ಮುನ್ನಡೆದಾಗ ಮಾತ್ರ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಭಾರತೀಯ ಹಾಕಿ ತಂಡದ ಮಾಜಿ ನಾಯಕ, ಅರ್ಜುನ, ಏಕಲವ್ಯ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಕಿ ಆಟಗಾರ ಡಾ. ಆಶೀಶ ಕುಮಾರ ಬಲ್ಲಾಳ ಹೇಳಿದ್ದಾರೆ.
ರವಿವಾರ ತಿಕೋಟಾದಲ್ಲಿರುವ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಎ. ಬಿ. ಜತ್ತಿ ಪಿಯು ಕಾಲೇಜು(ಪ್ರೌಢಶಾಲೆ ವಿಭಾಗ) ನಲ್ಲಿ ಅಂತಾರಾಷ್ಟ್ರೀಯ ಅಥ್ಲೇಟಿಕ್ ಕ್ರೀಡಾಪಟು, ಖ್ಯಾತ ವೈದ್ಯ ದಿ. ಡಾ. ಸಿ. ಆರ್. ಬಿದರಿ ಅವರ ಸ್ಮರಣಾರ್ಥ ಆಯೋಜಿಸಲಾಗಿರುವ ಎರಡು ದಿನಗಳ ಬಿ.ಎಲ್.ಡಿ.ಇ ಸಂಸ್ಥೆಯ 11ನೇ ಅಂತರಶಾಲೆ ಮತ್ತು ಕಾಲೇಜುಗಳ ಅಥ್ಪೇಕಿಟ್ ಕೂಟ ವಾರ್ಷಿಕ ಕ್ರೀಡಾ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಸಿ. ಆರ್. ಬಿದರಿ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದರೂ ಹಾಕಿ ಆಟಗಾರರಾಗಿರುವುದನ್ನು ತಿಳಿದು ತುಂಬಾ ಸಂತೋಷವಾಗಿದೆ. ಬಿದರಿ ಅವರ ಕುಟುಂಬದ ಸದಸ್ಯರು ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಆಯೋಜಿಸಿರುವ ಈ ಕ್ರೀಡಾಕೂಟ ಪ್ರಶಂಸನೀಯವಾಗಿದೆ. ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ನಾನು 17ನೇ ವಯಸ್ಸಿನಲ್ಲಿ ಹಾಕಿಗೆ ಪದಾರ್ಪಣೆ ಮಾಡಿದೆ. ಕ್ರೀಡಾ ಸಲಕರಣೆಗಳ ಮಧ್ಯೆಯೂ ಶ್ರಮಪಟ್ಟು ಸಾಧನೆ ಮಾಡಿದ್ದೇನೆ. ರಾಜ್ಯ ಮತ್ತು ದೇಶವನ್ನು ಪ್ರತಿನಿಧಿಸಿ ಏಷಿಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಜಯಿಸಿದ್ದು ಹೆಮ್ಮೆ ತಂದಿದೆ. ಹೀಗಾಗಿ ಪ್ರತಿಯೊಂದು ಸಾಧನೆಯ ಹಿಂದೆ ಸತತ ಪ್ರಯತ್ನ, ಸಾಧಿಸುವ ಛಲ ಇರಬೇಕು. ಪ್ರತಿಯೊಬ್ಬ ಕ್ರೀಡಾ ಸಾಧಕರ ಹಿಂದೆ ಅವರದೇ ಆದ ಸಾಧನೆಯ ಕುತೂಹಲಕಾರಿ ಕಥೆಗಳಿಗವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಪ್ಯಾರಾಓಲಂಪಿಯನ್ ರಕ್ಷಿತಾ ರಾಜು, ಬಂಜಾರಾ ಕಸೂತಿ ಸಂಸ್ಥೆಯ ಸಂಸ್ಥಾಪಕಿ ಆಶಾ ಎಂ. ಪಾಟೀಲ, ವಿಜೇಂದ್ರ ಬಿದರಿ, ಕಲ್ಪನಾ ಎಂ. ಪಾಟೀಲ, ದೃುವ ಎಂ. ಪಾಟೀಲ, ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ವೈ. ಎಂ. ಜಯರಾಜ, ರಜಿಸ್ಟಾರ ಡಾ. ಆರ್. ವಿ. ಕುಲಕರ್ಣಿ, ಆಡಳಿತಾಧಿಕಾರಿಗಳಾದ ವಿಲಾಸ ಎಸ್. ಬಗಲಿ, ಐ. ಎಸ್. ಕಾಳಪ್ಪನವರ, ದೈಹಿಕ ನಿರ್ದೇಶಕ ಎಸ್. ಎಸ್. ಕೋರಿ, ಸಹಾಯಕ ನಿರ್ದೇಶಕ ಕೈಲಾಶ ಹಿರೇಮಠ, ಎ. ಬಿ. ಜತ್ತಿ ಪಿಯು ಕಾಲೇಜು(ಪ್ರೌಢಶಾಲೆ ವಿಭಾಗ) ಉಪಪ್ರಾಚಾರ್ಯ ಜಗಧೀಶ ಎಂ. ಪಾಟೀಲ, ಶಿವರಾಜ ಕಲ್ಯಾಣಿ ಮುಂತಾದವರು ಉಪಸ್ಥಿತರಿದ್ದರು.
ಬಿ.ಎಲ್.ಡಿ. ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಪ್ರಕಾಶ ಸಿದ್ದಾಪೂರ ಸ್ವಾಗತಿಸಿದರು. ಪ್ರಾಚಾರ್ಯ ಸಿ. ಬಿ. ಪಾಟೀಲ ವಂದಿಸಿದರು. ಉಷಾ ಹೀರೆಮಠ ಮತ್ತು ಸುಭಾಷ ಕನ್ನೂರ ನಿರೂಪಿಸಿದರು.

Share this