ಹೋಟೆಲ್ ಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 29:
ನಗರ ಹೊರ ವಲಯದ ಸೊಲ್ಲಾಪುರ ರಸ್ತೆಯಲ್ಲಿನ ಹೋಟೆಲವೊಂದಕ್ಕೆ ಭಾನುವಾರ ತಡರಾತ್ರಿ ಆಕಸ್ಮಿಕ ಬೆಂಕಿ ತಗುಲಿ ಧಗಧಗನೇ ಹೊತ್ತಿ ಉರಿದು ಅಪಾರ ಹಾನಿಯಾಗಿದೆ.
ಕೃಷ್ಣ ಪ್ಯಾಲೇಸ್ ಹೋಟೆಲ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಹೋಟೆಲ್ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಧಗಧಗನೇ ಹೊತ್ತಿ ಉರಿಯುತ್ತಿರುವುದನ್ನು ಸಾರ್ವಜನಿಕರು ಗಮನಿಸಿ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕದಳದ ಸಿಬ್ಬಂದಿ ಘಟನಾಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಸುಮಾರು 1 ತಾಸಿಗೂ ಹೆಚ್ಚು ಕಾಲ ಹರ ಸಾಹಸ ಪಟ್ಟು ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.
ರಾತ್ರಿ ಹೊತ್ತು ಹೋಟೆಲ್ ಬಂದ್ ಇದ್ದಿದ್ದರಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ.
ಬೆಂಕಿ ಅವಘಡಕ್ಕೆ ನಿಖರ ಕಾರಣ ಗೊತ್ತಾಗಿಲ್ಲ. ವಿದ್ಯುತ್ ಶಾರ್ಟ್ ಸರ್ಕಿಟ್ ಅಥವಾ ಗ್ಯಾಸ್ ಲೀಕ್ ಆಗಿರಬಹುದು ಎಂದು ಪ್ರಾಥಮಿಕ ಮಾಹಿತಿ ಮೂಲಕ ತಿಳಿದು ಬಂದಿದೆ.

Share this