ಸಪ್ತಸಾಗರ ವಾರ್ತೆ, ವಿಜಯಪುರ,ನ.5:
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನೋಂದಾಯಿಸಲ್ಪಟ್ಟ ಎಲ್ಲಾ ಕೂಲಿಕಾರ್ಮಿಕರ ಇಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಅದರಲ್ಲೂ ಕ್ರಿಯಾತ್ಮಕ ಕೂಲಿಕಾರ್ಮಿಕರ ಇಕೆವೈಸಿ ಕಡ್ಡಾಯವಾಗಿ ಒಂದು ವಾರದೊಳಗೆ ನೂರರಷ್ಟು ಪ್ರಗತಿ ಸಾಧಿಸಲು ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಅಧಿಕಾರಿಗಳಿಗೆ ಸೂಚಿಸಿದರು.
ಬುಧವಾರ ಜಿಲ್ಲಾ ಪಂಚಾಯತಿಯಲ್ಲಿ ಜರುಗಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯತಿಯಡಿ ಕರ್ತವ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿಗಳ ವೇತನವನ್ನು ಸಕಾಲದಲ್ಲಿ ಪಾವತಿಸಬೇಕು. ಗ್ರಂಥಪಾಲಕರ ವೇತನ ಸ್ವಚ್ಚ ವಾಹಿನಿ ಚಾಲಕರ ವೇತನ ಹಾಗೂ ಕಸ ವಿಲೇವಾರಿ ಘಟಕಗಳಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳ ವೇತನವನ್ನು ಕಡ್ಡಾಯವಾಗಿ ನಿಗದಿತ ಅವಧಿಯೊಳಗೆ ಪಾವತಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮನರೇಗಾ ಯೋಜನೆಯಡಿ ಕೂಲಿಕಾರರ ಇಕೆವೈಸಿ ಜೊತೆ ಜೊತೆಗೆ ಬಾಕಿಯಿರುವ ಸಮುದಾಯ ಆಧಾರಿತ ಕಾಮಗಾರಿಗಳನ್ನು ಪ್ರಾರಂಭಿಸಬೇಕು. ರೂ.ಐದು ಲಕ್ಷ ಅನುದಾನದ ಮಿತಿಯಲ್ಲಿರುವ ಕಾಮಗಾರಿಗಳನ್ನು ಒಂದು ವಾರದೊಳಗಾಗಿ ಆರಂಭಿಸಬೇಕು ಹಾಗೂ 5 ಲಕ್ಷ ಮೀರಿದ ಕಾಮಗಾರಿಗಳನ್ನು ನಿಯಮಾನುಸಾರ ಟೆಂಡರ್ ಕರೆದು ಆಧ್ಯತೆಯಲ್ಲಿ ಪ್ರಾರಂಭಿಸಬೇಕು. ಆ ಮೂಲಕ ಕೂಲಿಕಾರ್ಮಿಕರಿಗೆ ನಿರಂತರ ಉದ್ಯೋಗ ಒದಗಿಸಬೇಕು ಎಂದರು.
ಸ್ವಚ್ಚ ಭಾರತ ಮಿಷನ್, ವಸತಿ ಯೋಜನೆ ಸೇರಿದಂತೆ ನಿಮ್ಮ ತಾಲೂಕು ಮತ್ತು ಗ್ರಾಮ ಪಂಚಾಯತಿಗಳಿಗೆ ನಿಗದಿಪಡಿಸಿದ ಗುರಿ ಸಾಧಿಸಬೇಕು. ಆ ನಿಟ್ಟಿನಲ್ಲಿ ನಿಮ್ಮ ಅಧೀನದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಡುವೆ ಸಮನ್ವಯತೆ ಸಾಧಿಸಿಕೊಂಡು ನಿಗದಿತ ಅವಧಿಯಲ್ಲಿ ಗುರಿ ತಲುಪಿ, ಗ್ರಾಮ ಪಂಚಾಯತಿಯಲ್ಲಿ ತೆರಿಗೆ ವಸೂಲಾತಿಯನ್ನು ಸಹ ನಿಗದಿತ ಅವಧಿಯಲ್ಲಿ ಸಂಗ್ರಹಿಸಬೇಕು. ತೆರಿಗೆ ವಸೂಲಿಯಾದರೆ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯ ಮಾಡಬಹುದು ಎಂಬುದನ್ನು ಜನರಿಗೆ ಮನವರಿಕೆ ಮಾಡಿ ಕರ ವಸೂಲಾತಿಗೆ ಕ್ರಮವಹಿಸಬೇಕು ಎಂದರು.
ಮುಖ್ಯ ಮಂತ್ರಿಯವರ 2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿ ತಿಳಿಸಿರುವಂತೆ, ಹಿರಿಯ ಅಧಿಕಾರಿಗಳಿಂದ ಗ್ರಾಮ ಪಂಚಾಯತಿಗಳನ್ನು ದತ್ತು ಪಡೆದು ಸಮಗ್ರವಾಗಿ ಅಭಿವೃದ್ಧಿಪಡಿಸುವ ಉದ್ಧೇಶದಿಂದ ಗ್ರಾಮ ಪಂಚಾಯತಿ ದತ್ತು ಕಾರ್ಯಕ್ರಮವನ್ನು ಆರಂಭಿಸಲಾಗುವುದು ಎಂದು ಘೋಷಣೆ ಮಾಡಿದ ಪ್ರಯುಕ್ತ ಕಾಯಕ ಗ್ರಾಮ ಕಾರ್ಯಕ್ರಮವನ್ನು ಆರಂಭಿಸಲಾಗಿದ್ದು,ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ ಮತ್ತು ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ ಸೇರಿದಂತೆ ಎಲ್ಲಾ ತಾಲೂಕು ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರುಗಳು, ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು, ಮನರೇಗಾ ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇಕೆವೈಸಿಯಲ್ಲಿ ಪ್ರಗತಿ ಸಾಧಿಸಿ: ಅಧಿಕಾರಿಗಳಿಗೆ ಜಿಪಂ ಉಪಕಾರ್ಯದರ್ಶಿ ಪ್ರಕಾಶ ವಡ್ಡರ ಸೂಚನೆ


