ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 20 :
ರೈತರು ಸುಸ್ಥಿರ, ಸಾವಯವ ಮತ್ತು ನೈಸರ್ಗಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗುವ ಜೊತೆಗೆ, ಆರೋಗ್ಯವಂತರಾಗಿ ಇರಬೇಕೆಂದು ನಿವೃತ್ತ ಸಹ ವಿಸ್ತರಣೆ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಹೇಳಿದರು.
ವಿಜಯಪುರ ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ 2025- 26 ನೇ ಸಾಲಿನ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನದಡಿಯಲ್ಲಿ, ಗುಚ್ಛ ಗ್ರಾಮ ಪಂಚಾಯತಿಗಳಲ್ಲಿ ದೃಷ್ಟಿಕೋನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಸಾಯನಿಕ ಬಳಕೆಯ ದುಷ್ಪರಿಣಾಮವನ್ನು ನಾವಿಂದು ಎಲ್ಲೆಡೆ ಕಾಣುತ್ತಿದ್ದೇವೆ. ರೈತರು ಅಧಿಕ ಇಳುವರಿ ಪಡೆಯುವ ಸಲುವಾಗಿ ಶಿಫಾರಸು ಮಾಡಿದ ಪ್ರಮಾಣಕ್ಕಿಂತ ಹೆಚ್ಚು ರಾಸಾಯನಿಕ ಗೊಬ್ಬರ, ಕೀಟನಾಶಕ, ಕಳೆನಾಶಕಗಳ ಬಳಕೆ ಮಾಡುತ್ತಿರುವುದರಿಂದ ಭೂಮಿಯ ಫಲವತ್ತತೆ ಹಾಳಾಗುತ್ತಿದೆ. ಅದಕ್ಕಾಗಿ ರೈತರು ಸಾವಯವ ಕೃಷಿ ಪದ್ಧತಿ ಅಳವಡಿಕೆ ಮಾಡಿಕೊಳ್ಳಬೇಕು ಎಂದರು. ನಿವೃತ್ತ ಪ್ರಾಧ್ಯಾಪಕ, ಕೃಷಿ ತಂತ್ರಜ್ಞರ ಸಂಸ್ಥೆಯ ಕಾರ್ಯದರ್ಶಿ, ಡಾ.ಶ್ರೀಶೈಲ ಗೋಟ್ಯಾಳ ಮಾತನಾಡಿ, ರೈತರು ಬೆಳೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು. ಬೆಳೆ ಪರಿವರ್ತನೆ, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಕೃಷಿಯಲ್ಲಿ ಸುಸ್ಥಿರತೆ ಸಾಧಿಸಿಕೊಳ್ಳಬೇಕೆಂದರು.
ಕೃಷಿ ಅಧಿಕಾರಿ ಜಯಪ್ರದಾ ದಶವಂತ ಮಾತನಾಡಿ, ಈ ಭಾಗದ ರೈತರಿಗೆ ಹೆಚ್ಚಿನ ಕೃಷಿ ಹೊಂಡಗಳನ್ನು ಮಾಡಿಕೊಟ್ಟು, ಬೆಳೆಯ ಸಂದಿಗ್ಧ ಹಂತದಲ್ಲಿ ನೀರು ಹಾಯಿಸಲು ಅನುಕೂಲ ಕಲ್ಪಿಸಲಾಗಿದೆ. ನೈಸರ್ಗಿಕ ಕೃಷಿ ಯೋಜನೆ ಅಡಿಯಲ್ಲಿ 125 ರೈತರನ್ನು ಆಯ್ಕೆ ಮಾಡಿ, ಹಂತ ಹಂತವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಿ, ರೈತರನ್ನು ಸಾವಯವ ಕೃಷಿ ಮಾಡಲು ಪ್ರೇರೇಪಿಸಲಾಗುತ್ತಿದೆ ಎಂದರು.
ಜಿಲ್ಲಾ ಪ್ರಾಂತೀಯ ಒಕ್ಕೂಟ ಕಾರ್ಯದರ್ಶಿ ಮಲ್ಲಿಕಾರ್ಜುನ ವಾಲಿಕಾರ ಯೋಜನೆ ಅನುಷ್ಠಾನ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಮದ ಪ್ರಮುಖರಾದ ಜ್ಯೋತಿಬಾ ಚವ್ಹಾಣ, ಸುಭಾಷ ಯಂಭತ್ನಾಳ, ಶಿವಪ್ಪ ಕಾಳೆ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಸಂತೋಷ ರಾಥೋಡ, ಚಂದ್ರಶೇಖರ ಯಾಳವಾರ, ಶಿವಾನಂದ ರಾಥೋಡ, ಪ್ರಗತಿಪರ ರೈತರಾದ ಗುರುಲಿಂಗಪ್ಪ ನಾಟಿಕಾರ, ಕಾಂತಪ್ಪ ಗಂಟಿ, ದಾನಪ್ಪ ಕೋಲಕಾರ, ಶಾಂತಪ್ಪ ಸಾರವಾಡ, ಮೂಧಸರ ವಾಲಿಕಾರ್ ಸೇರಿದಂತೆ ಗ್ರಾಮದ ನೂರಾರು ರೈತರು ಭಾಗವಹಿಸಿದ್ದರು.
ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಲಾಭ ಗಳಿಸಿ: ಡಾ. ಬೆಳ್ಳಿ


