ಕಡಲೆ ಬೆಳೆಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಿ: ಡಾ. ಬೆಳ್ಳಿ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 22 :
ರೈತರು ಕಡಲೆಯಲ್ಲಿ ಅಧಿಕ ಇಳುವರಿ ಪಡೆಯಲು ಆಧುನಿಕ ಕೃಷಿ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳಬೇಕೆಂದು ನಿವೃತ್ತ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಹೇಳಿದರು.
ಭಾನುವಾರ ವಿಜಯಪುರ ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮದ ಪ್ರಗತಿಪರ ರೈತ ಸಾರವಾಡ ಇವರ ಕ್ಷೇತ್ರದಲ್ಲಿ ಕೃಷಿ ಇಲಾಖೆಯಿಂದ 2025- 26 ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆದ ಕಡಲೆ ಬೆಳೆಯ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿದರು.
ರೈತರು ಕಡಲೆ ಬೆಳೆಗೆ ಅಧಿಕ ಇಳುವರಿ ಪಡೆಯಲು ಉತ್ತಮ ತಳಿಯ ಬೀಜ, ಬೀಜೋಪಚಾರ, ಕುಡಿ ಚಿವುಟುವಿಕೆಯಂತಹ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳಬೇಕೆಂದರು.
ನಿವೃತ್ತ ಪ್ರಾಧ್ಯಾಪಕ, ಕೃಷಿ ತಂತ್ರಜ್ಞರ ಸಂಸ್ಥೆಯ ಕಾರ್ಯದರ್ಶಿ ಡಾ.ಶ್ರೀಶೈಲ ಗೋಟ್ಯಾಳ ಕಡಲೆಯಲ್ಲಿ ವಿವಿಧ ತಳಿಗಳು, ಶಿಫಾರಸು ಮಾಡಿದ ಪ್ರಮಾಣದಲ್ಲಿ ಬೀಜ ಗೊಬ್ಬರ ಸಮಗ್ರ ಕೀಟ ರೋಗ ನಿರ್ವಹಣೆ ಕುರಿತು ಮಾತನಾಡಿದರು.
ಕೃಷಿ ಅಧಿಕಾರಿ ಜಯಪ್ರದಾ ದಶವಂತ ಮಾತನಾಡಿ, ದ್ವಿದಳ ಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹಿಸುವ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಫಲಾನುಭವಿ ರೈತರಿಗೆ ಕಡಲೆ ಬೆಳೆ ಬೆಳೆಯಲು ಬೀಜ, ಜೈವಿಕ ಗೊಬ್ಬರ ಮತ್ತು ಇತರ ಪರಿಕರಗಳನ್ನು ನೀಡಿ, ಹೆಚ್ಚಿನ ಇಳುವರಿ ಪಡೆಯಲು ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಜಿಲ್ಲಾ ಪ್ರಾಂತೀಯ ಒಕ್ಕೂಟ ಕಾರ್ಯದರ್ಶಿ ಮಲ್ಲಿಕಾರ್ಜುನ ವಾಲಿಕಾರ, ಗ್ರಾಮದ ಹಿರಿಯರಾದ ಜ್ಯೋತಿಬಾ ಚವ್ಹಾಣ, ಸುಭಾಷ ಯಂಬತ್ನಾಳ, ಶಿವಪ್ಪ ಕಾಳೆ, ಕೃಷಿ ಇಲಾಖೆಯ ಸಂತೋಷ ರಾಥೋಡ, ಚಂದ್ರಶೇಖರ ಯಾಳವಾರ, ಶಿವಾನಂದ ರಾಥೋಡ, ಪ್ರಗತಿಪರ ರೈತರಾದ ಗುರುಲಿಂಗಪ್ಪ ನಾಟಿಕಾರ, ಕಾಂತಪ್ಪ ಗಂಟಿ, ದಾನಪ್ಪ ಕೋಲಕಾರ, ಶಾಂತಪ್ಪ ಸಾರವಾಡ, ಮುದಸರ ವಾಲಿಕಾರ ಸೇರಿದಂತೆ ಗ್ರಾಮದ ರೈತರು ಕ್ಷೇತ್ರೋತ್ಸವದಲ್ಲಿ ಭಾಗವಹಿಸಿದ್ದರು.

Share this