ವಿಜಯಪುರದಲ್ಲಿ ಎಐ-ಎಂಎಲ್ ಹಾಗೂ ರೋಬೋಟಿಕ್ಸ್ ಪ್ರಯೋಗಾಲಯ ಉದ್ಘಾಟನೆ

ಸಪ್ತಸಾಗರ ವಾರ್ತೆ,ವಿಜಯಪುರ, ಜು.20:
ನಗರದ ವಿ.ಬಿ. ದರಬಾರ ಶಾಲೆಯಲ್ಲಿ ಸೋಮವಾರ ಅತ್ಯಾಧುನಿಕ ಎಐ (AI), ಮೆಷಿನ್ ಲರ್ನಿಂಗ್ (ML) ಹಾಗೂ ರೋಬೋಟಿಕ್ಸ್ ಪ್ರಯೋಗಾಲಯವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಕೆ.ಜಿ. ದೇಶಪಾಂಡೆ, ಇಂದಿನ ತಂತ್ರಜ್ಞಾನ ಯುಗದಲ್ಲಿ ಕೃತಕ ಬುದ್ಧಿಮತ್ತೆ (AI) ಮಾನವನ ಸಾಮರ್ಥ್ಯವನ್ನು ವಿಸ್ತರಿಸುವ ಪ್ರಮುಖ ಸಾಧನವಾಗಿದೆ. ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದಲೇ ಎಐ, ಮೆಷಿನ್ ಲರ್ನಿಂಗ್ ಹಾಗೂ ರೋಬೋಟಿಕ್ಸ್‌ನಂತಹ ನವೀನ ತಂತ್ರಜ್ಞಾನಗಳ ಬಗ್ಗೆ ಅರಿವು ಮತ್ತು ಪ್ರಾಯೋಗಿಕ ಅನುಭವ ಹೊಂದಿದರೆ ಭವಿಷ್ಯದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ನವೋದ್ಯಮ ಚಿಂತನೆ ಹಾಗೂ ತಾಂತ್ರಿಕ ಕೌಶಲ್ಯ ಬೆಳೆಸುವ ಉದ್ದೇಶದಿಂದ ವಿದ್ಯಾವರ್ಧಕ ಸಂಘ ಈ ಪ್ರಯೋಗಾಲಯವನ್ನು ಆರಂಭಿಸಿದ್ದು, ಇದರ ಮೂಲಕ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನಗಳ ಪ್ರಾಯೋಗಿಕ ತರಬೇತಿ ದೊರೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ಸದಸ್ಯರಾದ ವಿಕಾಸ್ ಕೆ. ದರಬಾರ, ಆದಿತ್ಯ ಎನ್. ದರಬಾರ ಹಾಗೂ ಪಾರ್ಥ ಎನ್. ದರಬಾರ ಅವರು ನೂತನ ಪ್ರಯೋಗಾಲಯದಲ್ಲಿ ಲಭ್ಯವಿರುವ ಸೌಲಭ್ಯಗಳು, ತರಬೇತಿ ಕಾರ್ಯಕ್ರಮಗಳು ಹಾಗೂ ಭವಿಷ್ಯದ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಸಮನ್ವಯಾಧಿಕಾರಿ ಡಾ. ವಿ.ಬಿ. ಗ್ರಾಮಪುರೋಹಿತ್, YUVI PEP ತಾಂತ್ರಿಕ ಸಿಬ್ಬಂದಿ ಹಾಗೂ ದರಬಾರ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share this