ಎಐ ಬಳಕೆಯಿಂದ ವಿಜಯಪುರ ಪ್ರವಾಸೋದ್ಯಮಕ್ಕೆ ಹೊಸ ಆಯಾಮ

ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ, ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ: ಶಾಸಕ ವಿಠ್ಠಲ ಕಟಕಧೋಂಡ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ.27: ವಿಜಯಪುರದ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ, ಪ್ರವಾಸಿ ತಾಣಗಳ ಅಭಿವೃದ್ಧಿ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಮೂಲಕ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡಲಾಗುವುದು ಎಂದು ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.
ನಗರದ ಇಬ್ರಾಹಿಂ ರೋಜಾ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ‘ಡಿಜಿಟಲ್ ಕಾರ್ಯಸೂಚಿ ಮತ್ತು ಕೃತಕ ಬುದ್ಧಿಮತ್ತೆ (ಎಐ) ಬಳಸಿ ಪ್ರವಾಸೋದ್ಯಮ ಮರುಸೃಷ್ಟಿ’ ಧ್ಯೇಯವಾಕ್ಯದೊಂದಿಗೆ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಜಯಪುರವು ಗೋಳಗುಮ್ಮಟ ಸೇರಿದಂತೆ ಅಪರೂಪದ ಕಲೆ, ವಾಸ್ತುಶಿಲ್ಪ ಹಾಗೂ ಐತಿಹಾಸಿಕ ಸ್ಮಾರಕಗಳ ಶ್ರೀಮಂತ ಪರಂಪರೆ ಹೊಂದಿದೆ. ಇವುಗಳ ಇತಿಹಾಸ ಮತ್ತು ಮಹತ್ವವನ್ನು ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಪರಿಚಯಿಸುವ ಮೂಲಕ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಸ್ಮಾರಕಗಳ ಕುರಿತ ಮಾಹಿತಿಯನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಸುಲಭವಾಗಿ ಒದಗಿಸಿ ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಬೇಕು ಎಂದರು.
ಪ್ರವಾಸೋದ್ಯಮದ ಬೆಳವಣಿಗೆಯಿಂದ ಸ್ಥಳೀಯ ವ್ಯಾಪಾರ, ಸಾರಿಗೆ, ಹೋಟೆಲ್, ಪ್ರವಾಸಿ ಮಾರ್ಗದರ್ಶಕರು ಹಾಗೂ ಸಣ್ಣ ಉದ್ಯಮಗಳಿಗೆ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಲಿವೆ. ಇದರಿಂದ ಯುವಜನರಿಗೆ ಉದ್ಯೋಗ ಮತ್ತು ಸ್ವಉದ್ಯೋಗದ ಅವಕಾಶಗಳು ಹೆಚ್ಚಾಗಿ ಜಿಲ್ಲೆಯ ಆರ್ಥಿಕ ಚಟುವಟಿಕೆಗಳಿಗೆ ವೇಗ ದೊರೆಯಲಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಅವರ ದೂರದೃಷ್ಟಿಯ ಪರಿಣಾಮವಾಗಿ ನಿರ್ಮಾಣಗೊಂಡ ನೀರಾವರಿ ಕಾಲುವೆಗಳಿಂದ ಬರಗಾಲದ ಸಂದರ್ಭದಲ್ಲೂ ಜಿಲ್ಲೆಗೆ ನೀರಿನ ಲಭ್ಯತೆ ದೊರೆಯುತ್ತಿದೆ. ನೀರಾವರಿ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ ಶ್ಲಾಘನೀಯವಾಗಿದ್ದು, ಆಧುನಿಕ ಭಗೀರಥರಾಗಿದ್ದಾರೆ ಎಂದು ಕಟಕಧೋಂಡ ಹೇಳಿದರು.

ಪ್ರವಾಸೋದ್ಯಮ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಲಿ

ವಿಜಯಪುರ ಉಪ ವಿಭಾಗಾಧಿಕಾರಿ ಜುಫಿಶಾನ್ ಹಕ್ ಮಾತನಾಡಿ, ಬಾಲ್ಯದಲ್ಲಿ ವಿಜಯಪುರ ಎಂದರೆ ಗೋಳಗುಮ್ಮಟ ನೆನಪಾಗುತ್ತಿತ್ತು. ಆದರೆ ಜಿಲ್ಲೆಯಲ್ಲಿ ಗೋಳಗುಮ್ಮಟ ಮಾತ್ರವಲ್ಲದೆ ಸಾವಿರಾರು ಐತಿಹಾಸಿಕ ಸ್ಮಾರಕಗಳಿದ್ದು, ಅವುಗಳ ಪರಿಚಯವನ್ನು ಹೆಚ್ಚಿನ ಜನರಿಗೆ ಮಾಡಿಸುವ ಅಗತ್ಯವಿದೆ ಎಂದರು.
ವಿದ್ಯಾರ್ಥಿಗಳು ವಿನ್ಯಾಸಗೊಳಿಸಿರುವ ಪ್ರವಾಸೋದ್ಯಮ ಆ್ಯಪ್‌ನಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳು, ಹೋಟೆಲ್‌ಗಳು ಸೇರಿದಂತೆ ಪ್ರವಾಸಿಗರಿಗೆ ಅಗತ್ಯವಿರುವ ವಿವಿಧ ಮಾಹಿತಿಗಳನ್ನು ಒದಗಿಸಲಾಗುತ್ತಿದೆ. ತಂತ್ರಜ್ಞಾನದ ಬಳಕೆಯಿಂದ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಇಂತಹ ಪ್ರಯತ್ನಗಳು ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕವಾಗಲಿವೆ ಎಂದು ತಿಳಿಸಿದರು.
ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಎಲ್ಲರ ಜವಾಬ್ದಾರಿಯಾಗಿದ್ದು, ಪ್ರವಾಸಿ ತಾಣಗಳ ಸಂರಕ್ಷಣೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಕರೆ ನೀಡಿದರು.
ಭಾರತೀಯ ಪುರಾತತ್ವ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ವಿಜಯಕುಮಾರ ಮಾತನಾಡಿ, ವಿಜಯಪುರದ ಕಲೆ, ವಾಸ್ತುಶಿಲ್ಪ ಹಾಗೂ ಐತಿಹಾಸಿಕ ಪರಂಪರೆಯ ಕುರಿತು ಯುವಜನರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಅರಿವು ಬೆಳೆಸಿಕೊಳ್ಳಬೇಕು. ಸ್ಮಾರಕಗಳ ಮಹತ್ವ ಅರಿತು ಅವುಗಳ ಸಂರಕ್ಷಣೆಗೆ ಕೈಜೋಡಿಸಬೇಕು ಎಂದರು.

ಎಐ ಮೂಲಕ ಪ್ರವಾಸಿಗರನ್ನು ಸೆಳೆಯಲು ಸಲಹೆ

ವಿಶೇಷ ಉಪನ್ಯಾಸ ನೀಡಿದ ಸುಮಂಗಲಾ ಬಿರಾದಾರ ಅವರು, ಡಿಜಿಟಲ್ ತಂತ್ರಜ್ಞಾನ ಹಾಗೂ ಎಐ ಬಳಕೆಯ ಮೂಲಕ ಪ್ರವಾಸಿಗರಲ್ಲಿ ಆಸಕ್ತಿ ಮೂಡಿಸಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬಹುದು ಎಂದರು.
ಪ್ರವಾಸಿಗರಿಗೆ ತ್ವರಿತವಾಗಿ ಮಾಹಿತಿ, ಮಾರ್ಗದರ್ಶನ ಹಾಗೂ ಸ್ಮಾರಕಗಳ ಇತಿಹಾಸ ಒದಗಿಸುವ ಮೂಲಕ ಅವರ ಪ್ರವಾಸದ ಅನುಭವವನ್ನು ಸುಲಭಗೊಳಿಸಲು ಎಐ ಆಧಾರಿತ ಸೇವೆಗಳನ್ನು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

‘ಡಿಸ್ಕವರ್ ವಿಜಯಪುರ’ ಆ್ಯಪ್ ಬಿಡುಗಡೆ

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಬಿಎಲ್‌ಡಿಇ ಸಂಸ್ಥೆಯ ಡಾ. ಫ.ಗು. ಹಳಕಟ್ಟಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ವಿದ್ಯಾರ್ಥಿಗಳಾದ ದತ್ತಾ ಹಾಗೂ ತಂಡ ಅಭಿವೃದ್ಧಿಪಡಿಸಿರುವ ‘ಡಿಸ್ಕವರ್ ವಿಜಯಪುರ’ ಎಐ ಆ್ಯಪ್‌ನ್ನು ಬಿಡುಗಡೆ ಮಾಡಲಾಯಿತು.
ಆ್ಯಪ್ ವಿಜಯಪುರಕ್ಕೆ ಆಗಮಿಸುವ ಪ್ರವಾಸಿಗರಿಗೆ ಡಿಜಿಟಲ್ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದು, ಗೋಳಗುಮ್ಮಟ ಸೇರಿದಂತೆ ಪ್ರಮುಖ ಹಾಗೂ ಅಪರೂಪದ ಐತಿಹಾಸಿಕ ಸ್ಥಳಗಳ ಮಾಹಿತಿ, ಪ್ರವಾಸ ಯೋಜನೆ, ವಸತಿ ವ್ಯವಸ್ಥೆ, ಸ್ಥಳೀಯ ಆಹಾರ, ಅಧಿಕೃತ ಪ್ರವಾಸಿ ಮಾರ್ಗದರ್ಶಕರ ಮಾಹಿತಿ ಹಾಗೂ ಟಾಂಗಾ ಸವಾರಿಯಂತಹ ಪ್ರವಾಸಿ ಅನುಭವಗಳ ವಿವರಗಳನ್ನು ಒದಗಿಸಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಅರವಿಂದ ಹೂಗಾರ ತಿಳಿಸಿದರು.
ಕಾರ್ಯಕ್ರಮದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವಿಜಯಕುಮಾರ ಬಂಡಿ ಹಾಗೂ ಪ್ರವಾಸಿ ಮಿತ್ರರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಸಂತ ಹೊನಮೊಡೆ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ಡಿಎಚ್‌ಒ ಡಾ. ಮಲ್ಲನಗೌಡ ಬಿರಾದಾರ, ಬಿಎಲ್‌ಡಿಇ ಸಂಸ್ಥೆಯ ಪ್ರಾಂಶುಪಾಲ ಮಂಜುನಾಥ ಪಿ., ಡಾ. ವೈ. ತಮ್ಮಣ್ಣ, ಪೀಟರ್ ಅಲೆಕ್ಸಾಂಡರ್, ಭೀಮರಾಯ ಜಿಗಜಿಣಗಿ, ಅಡಿವೆಪ್ಪ ಸಾಲಗಲ್, ಡಿ.ಪಿ. ಜಾಧವ, ಡಾ. ಅಮೀನ ಹುಲ್ಲೂರ, ಗಿರೀಶ ಹನಮರಡ್ಡಿ, ಕೆಎಸ್‌ಟಿಡಿಸಿ ಮ್ಯಾನೇಜರ್ ಜಗದೇವಿ ಕೆಂಬಾವಿ ಸೇರಿದಂತೆ ವಿದ್ಯಾರ್ಥಿಗಳು, ಪ್ರವಾಸೋದ್ಯಮ ಮಿತ್ರರು, ಸಾರ್ವಜನಿಕರು ಹಾಗೂ ಪ್ರವಾಸಿಗರು ಉಪಸ್ಥಿತರಿದ್ದರು.

Share this