ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 20:
ಜಿಲ್ಲೆಯಲ್ಲಿ ಜೂನ್ 28 ರಿಂದ ಜುಲೈ 1ರವರೆಗೆ ರಾಷ್ಟ್ರೀಯ ಪಲ್ಸ್ ಪೊಲಿಯೋ ಲಸಿಕಾ ಅಭಿಯಾನಕ್ಕಾಗಿ ಅಗತ್ಯ ಸಿದ್ಧತೆ ಕೈಗೊಂಡು ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ.ಕೆ ಅವರು ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಮುಖವಾಗಿ 5 ವರ್ಷದೊಳಗಿನ ಒಟ್ಟು 2,92,495 ಮಕ್ಕಳಿಗೆ ಪಲ್ಸ್ ಪೊಲಿಯೋ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
ಗ್ರಾಮೀಣ ಪ್ರದೇಶದ 2,21,996 ಮಕ್ಕಳು ಹಾಗೂ ನಗರ ಪ್ರದೇಶದ 70,499 ಮಕ್ಕಳು ಸೇರಿದ್ದಾರೆ. ಜಿಲ್ಲೆಯ ಒಟ್ಟು 4,78,283 ಮನೆಗಳಿಗೆ ಲಸಿಕಾ ಕಾರ್ಯಕರ್ತರು ಭೇಟಿ ನೀಡಲಿದ್ದು, ಲಸಿಕೆಯಿಂದ ಯಾವುದೇ ಮಗು ವಂಚಿತವಾಗದಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಲಸಿಕಾ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಬಸವನ ಬಾಗೇವಾಡಿ, ವಿಜಯಪುರ, ಇಂಡಿ, ಮುದ್ದೇಬಿಹಾಳ ಮತ್ತು ಸಿಂದಗಿ ತಾಲೂಕಾ ವ್ಯಾಪ್ತಿಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.
ಜಿಲ್ಲೆಯಾದ್ಯಂತ ಒಟ್ಟು 1,486 ಲಸಿಕಾ ಕೇಂದ್ರಗಳನ್ನು ಬೂತ್ ಗಳನ್ನು ಸ್ಥಾಪಿಸಲಾಗುತ್ತಿದ್ದು, ಇದರೊಂದಿಗೆ ಪ್ರಮುಖ ನಿಲ್ದಾಣ ಹಾಗೂ ಜಂಕ್ಷನ್ ಗಳಿಗಾಗಿ 41 ಟ್ರಾನ್ಸಿಟ್ ತಂಡಗಳು ಮತ್ತು ದೂರದ ಪ್ರದೇಶಗಳಿಗಾಗಿ 31 ಮೊಬೈಲ್ ತಂಡಗಳು ಸೇರಿದಂತೆ ಒಟ್ಟು 1,558 ತಂಡಗಳು ನಿಯೋಜಿಸಲಗುವುದು.
ಈ ತಂಡಗಳ ಯಶಸ್ವಿ ಮೇಲ್ವಿಚಾರಣೆಗಾಗಿ 280 ಮೇಲ್ವಿಚಾರಕರನ್ನು
ನೇಮಕ ಮಾಡಲಾಗಿದ್ದು,ಗರಿಷ್ಠ ಹೈ ರಿಸ್ಕ್ ಹೊಂದಿರುವ 1,010 ಹಾಗೂ 115 ವಲಸೆ ಪ್ರದೇಶಗಳ ಮೇಲೆಯೂ ಆರೋಗ್ಯ ಇಲಾಖೆ ವಿಶೇಷ ನಿಗಾ ವಹಿಸಬೆಕು ಎಂದರು.
ಮೈಕ್ರೋ ಪ್ಲ್ಯಾನಿಂಗ್ ಮಾಡಿಕೊಳ್ಳಬೇಕು:
ಬೂತ್ ವ್ಯಾಕ್ಸಿನೆಟರ್ ತರಬೇತಿ ಪೂರಕವಾಗಿ ಎಲ್ಲದರ ಕುರಿತು ಯೋಜನೆ ರೂಪಿಸಿಕೊಳ್ಳಬೇಕು. ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ತರಬೇತಿಗೊಳಿಸಿ, ಸಂಬಂಧಿಸಿದ ಎಲ್ಲ ಇಲಾಖೆಯ ಸಮನ್ವಯದೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
ತಾಲೂಕಾ ಟಿಎಚ್ಒ ಅವರು ಜವಾಬ್ದಾರಿ ತೆಗೆದುಕೊಂಡು ಅಭಿಯಾನ ಕಾರ್ಯಕ್ರಮಕ್ಕೆ ಯಶಸ್ಸಿಗೆ ಕಾರ್ಯ ನಿರ್ವಹಿಸಬೇಕು. ಲಸಿಕಾ ದಿನ ಅಂಗನವಾಡಿ ಕೇಂದ್ರವನ್ನು ತೆರೆದಿಡಬೇಕು. ಅಂಗನವಾಡಿ ಹಾಗೂ ಮೇಲ್ವಿಚಾರಕರು ಲಸಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಇದೇ ವೇಳೆ ಸೂಚಿಸಿದರು.
ಶಾಲೆಗಳಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ಕುರಿತಾಗಿ ಜಾಥಾ ಹಮ್ಮಿಕೊಳ್ಳಬೇಕು. ಲಸಿಕಾ ದಿನ ಶಾಲಾ ಕೊಠಡಿಯೂ ಸೇರಿದಂತೆ ವ್ಯವಸ್ಥೆ ಮಾಡಿಕೊಳ್ಳಬೇಕು.ವಲಸೆ ಮಕ್ಕಳನ್ನು ಗುರುತಿಸಿ ಪ್ರತ್ಯೇಕ ಯೋಜನೆ ಮಾಡಿಕೊಂಡು ಕಾರ್ಯ ನಿರ್ವಹಿಸಬೇಕು ಎಂದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಡಂಗೂರ, ಸಾರುವ, ಲಸಿಕಾ ಸ್ಥಳ ಹಾಗೂ ಸಮಯ ನಮೂದಿತ ಕರಪತ್ರದ ಮೂಲಕ ಈ ಕಾರ್ಯಕ್ರಮದ ಕುರಿತು ಜನರಿಗೆ ತಿಳಿಸಿಕೊಡಬೇಕು ಎಂದರು.
ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರದೇಶಗಳಲ್ಲಿ ಲಸಿಕಾ ಪೂರ್ವ ಬ್ಯಾನರ್, ಭಿತ್ತಿ ಪತ್ರದ ಮೂಲಕ ಪ್ರಚಾರ ಕೈಗೊಳ್ಳಬೇಕು. ಎಲ್ಲರೂ ಸಮನ್ವಯದಿಂದ ಕಾರ್ಯ ನಿರ್ವಹಿಸಿ ನೂರಕ್ಕೆ ನೂರರಷ್ಟು ಮಕ್ಕಳು ಲಸಿಕೆ ಪಡೆದುಕೊಳ್ಳಲು ಸೂಕ್ತ ಮೇಲ್ವಿಚಾರಣೆ ಕೈಗೊಳ್ಳಬೇಕು ಎಂದರು.
ಲಸಿಕಾ ಕಾರ್ಯಕ್ರಮ ಅಗತ್ಯ ಇರುವ ಅಗತ್ಯ ವಾಹನಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದ ಅವರು, ಟ್ರಾಂಜಿಟ್ ತಂಡ ಇದ್ದಲ್ಲಿ ಬಸ್ಸು ಅನಿವಾರ್ಯ ಸಂದರ್ಭದಲ್ಲಿ ನಿಲುಗಡೆಗೆ ವಾಹನ ಚಾಲಕರಿಗೆ ಸೂಚಿಸಬೇಕು. ಪ್ರಮುಖ ಬಸ್ ನಿಲ್ದಾಣಗಳ ಧ್ವನಿವರ್ಧಕ ಮೂಲಕ ಈ ಮಾಹಿತಿ ಪ್ರಸಾರಗೊಳಿಸಬೇಕು ಎಂದು ಸೂಚಿಸಿದರು.
ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳು, ಕಬ್ಬು ಕಟಾಯಿಸುವ ಕಾರ್ಮಿಕರ ಮಕ್ಕಳು ಹಾಗೂ ವಲಸೆ ಪ್ರದೇಶಗಳಲ್ಲಿ 0-5 ವರ್ಷದೊಳಗಿನ ಮಕ್ಕಳನ್ನು ಗುರುತಿಸಿ ಲಸಿಕೆ ನೀಡಲು ಕ್ರಮ ವಹಿಸಬೇಕು.
ನಗರ ಪ್ರದೇಶದ ಎಲ್ಲಾ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್ ಮತ್ತು ವೈದ್ಯಕೀಯ ಸಂಸ್ಥೆಗಳು ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು.
ವೈದ್ಯಕೀಯ ಮಹಾವಿದ್ಯಾಲಯ ನರ್ಸಿಂಗ್ ತಂಡದೊಂದಿಗೆ ಕಾರ್ಯಕ್ರಮದ ಮೊಬಲೈಜೇಶನ್ ಮಾಡುವಂತೆಯೂ,ಲಸಿಕಾ ಕಾರ್ಯಕ್ರಮ ನಡೆಯುವ ದಿವಸ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕಾ ಆಸ್ಪತ್ರೆಗಳಲ್ಲಿ ನಿರಂತರ ವಿದ್ಯುತ್ ಪೂರೈಕೆಗಾಗಿ ಕ್ರಮ ವಹಿಸಬೇಕು ಎಂದು ಹೆಸ್ಕಾಂ ಅಧಿಕಾರಿಳಿಗೆ ಸೂಚಿಸಿದರು.
ಈ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಕುರಿತು
ಆಡಿಯೋ ಜಿಂಗಲ್ಸ್ಗಳನ್ನು ಸ್ವಚ್ಛತಾ ವಾಹನಗಳ ಮೂಲಕ ಪ್ರಚುರಪಡಿಸಿ ಹಾಗೂ ಕರಪತ್ರ ಮುದ್ರಿಸಿ, ಗ್ರಾಪಂ ವಾರ್ಡಗಳಲ್ಲಿ ಪ್ರಚುರಪಡಿಸಬೇಕು ಎಂದು ಸಭೆಯಲ್ಲಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ವಿಶೇಷ ಪ್ರಚಾರ ಸಾಮಗ್ರಿಯ ಪೋಸ್ಟರ್ ಗಳನ್ನು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು
ಬಿಡುಗಡೆಗೊಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಂಪತ್ ಗುಣಾರಿ, ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ, ಡಾ.ಪರಸುರಾಮ ಹಿಟ್ನಳ್ಳಿ, ಡಾ.ಎಲ್.ಎಚ್.ಬಿದರಿ,
ಮುಕುಂದ ಗಲಗಲಿ ಸೇರಿದಂತೆ ಆರೋಗ್ಯ ಇಲಾಖೆಯ ತಾಲೂಕು ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.


