ಕಾನೂನು ಸುವ್ಯವಸ್ಥೆ ಕುಸಿತ ಆರೋಪ: ವಿಜಯಪುರದಲ್ಲಿ ಬಿಜೆಪಿ ಬೃಹತ್ ರ‍್ಯಾಲಿ

ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಕೆ

ಸಪ್ತಸಾಗರ ವಾರ್ತೆ,ವಿಜಯಪುರ, ಜು. 24:
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿ, ರಾಜ್ಯಪಾಲರು ಮಧ್ಯಪ್ರವೇಶಿಸಿ ರಾಜ್ಯ ಸರ್ಕಾರಕ್ಕೆ ಅಗತ್ಯ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಜಿಲ್ಲಾ ಘಟಕದ ನೇತೃತ್ವದಲ್ಲಿ ಶುಕ್ರವಾರ ವಿಜಯಪುರದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಿತು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಆರಂಭವಾದ ಪ್ರತಿಭಟನಾ ರ‍್ಯಾಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿತು. ಬಳಿಕ ರಾಜ್ಯಪಾಲರಿಗೆ ಉದ್ದೇಶಿಸಿದ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿ, ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು-ಸುವ್ಯವಸ್ಥೆಯನ್ನು ಸರಿಪಡಿಸಲು ತಕ್ಷಣ ಮಧ್ಯಪ್ರವೇಶಿಸುವಂತೆ ಕೋರಲಾಯಿತು.

‘ರಾಜ್ಯದಲ್ಲಿ ಗೂಂಡಾರಾಜ್ ಸೃಷ್ಟಿಯಾಗಿದೆ’

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯದ ಕಾನೂನು-ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಸಮಾಜಘಾತುಕ ಶಕ್ತಿಗಳು ಮತ್ತು ಗೂಂಡಾ ಪ್ರವೃತ್ತಿಗಳು ರಾಜಾರೋಷವಾಗಿ ಮೆರೆಯುವ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಸರ್ಕಾರದ ಜನವಿರೋಧಿ ನೀತಿಗಳನ್ನು ಪ್ರಶ್ನಿಸುವ ಸಾರ್ವಜನಿಕರು, ಬಿಜೆಪಿ ಕಾರ್ಯಕರ್ತರು ಹಾಗೂ ವಿರೋಧ ಪಕ್ಷದ ನಾಯಕರ ಮೇಲೆ ನಿರಂತರ ಬೆದರಿಕೆ, ದೌರ್ಜನ್ಯ ಮತ್ತು ಹಲ್ಲೆಗಳು ನಡೆಯುತ್ತಿವೆ. ಆಡಳಿತ ಪಕ್ಷದ ಬೆಂಬಲದಿಂದ ಇಂತಹ ಘಟನೆಗಳು ಹೆಚ್ಚಾಗುತ್ತಿದ್ದು, ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

‘ಪೊಲೀಸರು ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿಲ್ಲ’

ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ರಾಜ್ಯದಲ್ಲಿ ಪೊಲೀಸ್ ಇಲಾಖೆ ಆಡಳಿತ ಪಕ್ಷದ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು. ದೂರು ನೀಡಿದರೂ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೆ ವಿರೋಧದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಇದರಿಂದ ಮಹಿಳೆಯರು ಸೇರಿದಂತೆ ಜನಸಾಮಾನ್ಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.

ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಒತ್ತಾಯ

ಸಾವಯವ ಬೀಜ ಪ್ರಮಾಣನ ಸಂಸ್ಥೆಯ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಮಾತನಾಡಿ, ರಾಜ್ಯಪಾಲರು ತಮ್ಮ ಸಂವಿಧಾನಾತ್ಮಕ ಅಧಿಕಾರ ಬಳಸಿ ರಾಜ್ಯ ಸರ್ಕಾರ ಹಾಗೂ ಗೃಹ ಇಲಾಖೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿ ಸಾರ್ವಜನಿಕರಲ್ಲಿರುವ ಆತಂಕ ನಿವಾರಣೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಾಬು ಮಾಶ್ಯಾಳ, ಮಳುಗೌಡ ಪಾಟೀಲ, ಈರಣ್ಣ ರಾವೂರ, ಕಾಸುಗೌಡ ಬಿರಾದಾರ, ಸಂಜೀವ ಐಹೊಳೆ, ಉಮೇಶ ಕಾರಜೋಳ, ಸುರೇಶ ಬಿರಾದಾರ, ಗೋಪಾಲ ಘಟಕಾಂಬಳೆ, ವಿವೇಕಾನಂದ ಡಬ್ಬಿ, ಮಹೇಂದ್ರಕುಮಾರ ನಾಯಕ, ಭೀಮಾಶಂಕರ ಹದನೂರ, ಉಮೇಶ ಕೋಳಕೂರ, ಕೃಷ್ಣಾ ಗುನ್ಹಾಳಕರ, ಚಿದಾನಂದ ಚಲವಾದಿ, ಮಲ್ಲಿಕಾರ್ಜುನ ಜೋಗೂರ, ಸ್ವಪ್ನಾ ಕಣಮುಚನಾಳ, ರಾಹುಲ ಜಾಧವ, ಮಹೇಶ ಒಡೆಯರ, ರಾಜಶೇಖರ ಮಗಿಮಠ, ಮಂಜುನಾಥ ಮಿಸೆ, ರವಿಕಾಂತ ಬಗಲಿ, ರಾಘವೇಂದ್ರ ಕಾಪಸೆ, ರವಿಕಾಂತ ವಗ್ಗೆ, ಸಚಿನ್ ಬೋಂಬಳೆ, ಭೀಮಸಿಂಗ್ ರಾಠೋಡ, ಸಂದೀಪ ಪಾಟೀಲ, ಸಂತೋಷ ಪಾಟೀಲ ಡಂಬಳ, ಚಂದ್ರಶೇಖರ ಪಾಟೀಲ, ಸಿದ್ದಗೊಂಡ ಬಿರಾದಾರ, ಸಂತೋಷ ಕುರದಡ್ಡಿ ಹಾಗೂ ಹಣಮಂತ್ರಾಯಗೌಡ ಪಾಟೀಲ ಸೇರಿದಂತೆ ನೂರಾರು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

Share this