ಸಪ್ತಸಾಗರ ವಾರ್ತೆ,ವಿಜಯಪುರ, ಏ. 10 :
ವಿಜಯಪುರ ನಗರಕ್ಕೆ ಸಮರ್ಪಕವಾಗಿ ಹಾಗೂ ಇನ್ನಷ್ಟೂ ಪರಿಣಾಮಕಾರಿಯಾಗಿ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಕಾವೇರಿ 1, 2 ನೇ ಹಂತದ ಯೋಜನೆಯ ಮಾದರಿಯಲ್ಲಿ ಕೃಷ್ಣಾ ನದಿಯಿಂದ ವಿಜಯಪುರಕ್ಕೆ ನೀರು ಪೂರೈಕೆ ಮಾಡುವ ಇನ್ನೊಂದು ಹಂತದ ಪರ್ಯಾಯ ಯೋಜನೆಯನ್ನು ರೂಪಿಸಲಾಗುತ್ತಿದ್ದು, ಸಮಗ್ರ ಯೋಜನಾ ವರದಿ ಸಿದ್ಧಗೊಳ್ಳುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಪ್ರಕಟಿಸಿದರು.
ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ 30 ವರ್ಷಗಳ ಭವಿಷ್ಯದ ದೂರದೃಷ್ಟಿಕೋನ ಆಧರಿಸಿ ನಗರದಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿದೆ. ನಗರ ವ್ಯಾಪ್ತಿಯ ವಿಸ್ತಿರ್ಣವೂ ವ್ಯಾಪಿಸುತ್ತಿದೆ. ಹೀಗಾಗಿ ಜನಸಂಖ್ಯೆಯ ಹೆಚ್ಚಳ ಆಧರಿಸಿ ಕುಡಿಯುವ ನೀರಿನ ಪೂರೈಕೆ ಯೋಜನೆಯೂ ವಿಸ್ತರಣೆಗೊಳ್ಳಬೇಕಾಗಿರುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪೂರ್ವ ತಯಾರಿ ನಡೆದಿದ್ದು, ಮುಂಬರುವ ಬಜೆಟ್‌ನಲ್ಲಿ ಇದಕ್ಕೆ ಅನುದಾನ ಪಡೆದುಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ವಿಜಯಪುರ ನಗರದಲ್ಲಿ 15ರಿಂದ 20 ದಿನಕ್ಕೊಮ್ಮೆ ವಿವಿಧ ಬಡಾವಣೆಗಳಲ್ಲಿ ನೀರು ಪೂರೈಕೆಯಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಇನ್ನೊಂದು ಹಂತದ ಯೋಜನೆ ಅನುಷ್ಠಾನಗೊಂಡರೆ ಕುಡಿಯುವ ನೀರಿನ ಸಮಸ್ಯೆಯನ್ನು ಸಂಪೂರ್ಣವಾಗಿ ತೊಡೆದು ಹಾಕಬಹುದಾಗಿದೆ. ಈ ನಿಟ್ಟಿನಲ್ಲಿ ಪರ್ಯಾಯ ಯೋಜನೆಯನ್ನು ಶೀಘ್ರವೇ ಅನುಷ್ಠಾನಗೊಳಿಸಲಾಗುತ್ತಿದ್ದು, ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ ನಂತರ ಈ ಯೋಜನೆ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ನಗರ ಪ್ರದೇಶದಲ್ಲಿಯೂ ಕುಡಿಯುವ ನೀರಿನ ವ್ಯತ್ಯಯ ತಡೆಗಟ್ಟುವ ನಿಟ್ಟಿನಲ್ಲಿ ಜಲಮಂಡಳಿ ಹಾಗೂ ಪಾಲಿಕೆ ಅಧಿಕಾರಿಗಳು ಸಮನ್ವಯ ಸಾಧಿಸಿ ಕುಡಿಯುವ ನೀರಿನ ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಅಗತ್ಯ ನಿರ್ದೇಶನ ನೀಡಲಾಗಿದೆ. ಎಲ್ಲ ಬಾವಡಿಗಳನ್ನು ಸ್ವಚ್ಚಗೊಳಿಸಿ ಗೃಹೋಪಯೋಗಿ ಚಟುವಟಿಕೆಗಳಿಗೆ ಬಳಸುವ ನಿಟ್ಟಿನಲ್ಲಿಯೂ ಅಗತ್ಯ ಕಾರ್ಯಯೋಜನೆ ರೂಪಿಸುವಂತೆಯೂ ನಿರ್ದೇಶನ ನೀಡಲಾಗಿದೆ ಎಂದರು.
50 ಹಳ್ಳಿಗಳಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆ
ಗ್ರಾಮೀಣ ಭಾಗದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, 50 ಗ್ರಾಮಗಳಲ್ಲಿ ಈ ಸಮಸ್ಯೆ ತಲೆದೋರಬಹುದು ಎಂದು ಅಂದಾಜಿಸಲಾಗಿದ್ದು, ಅಲ್ಲಿ ಮುಂಜಾಗ್ರತಾ ಕ್ರಮವಾಗಿ ಕಾರ್ಯಚಟುವಟಿಕೆ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಚಡಚಣ ತಾಲೂಕಿನಲ್ಲಿ 17, ಇಂಡಿ ತಾಲೂಕಿನಲ್ಲಿ 22, ವಿಜಯಪುರ ತಾಲೂಕಿನ 3, ತಾಳಿಕೋಟೆ ತಾಲೂಕಿನಲ್ಲಿ 2 , ದೇವರಹಿಪ್ಪರಗಿಯಲ್ಲಿ ಒಂದು, ತಿಕೋಟಾ ತಾಲೂಕಿನಲ್ಲಿ 5 ಗ್ರಾಮಗಳಲ್ಲಿ ಹಾಗೂ ಜಿಲ್ಲೆಯ 72 ಜನವಸತಿ ಕೇಂದ್ರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಡಾ.ಎಂ.ಬಿ. ಪಾಟೀಲ ವಿವರಿಸಿದರು.
ಈ ವರ್ಷ ಶೇ.53ರಷ್ಟು ಮಳೆ ಹೆಚ್ಚುವರಿಯಾಗಿದೆ. ಜಲಾಶಯಗಳಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಆಲಮಟ್ಟಿ ಜಲಾಶಯದಲ್ಲಿ 29 ಟಿಎಂಸಿ ನೀರಿನ ಸಂಗ್ರಹಣೆ ಇತ್ತು. ಪ್ರಸಕ್ತ ವರ್ಷ 34 ಟಿಎಂಸಿ ಇದ್ದು, 5 ಟಿಎಂಸಿ ಹೆಚ್ಚುವರಿಯಾಗಿ ನೀರಿನ ಸಂಗ್ರಹಣೆ ಇದೆ. ನಾರಾಯಣಪೂರ ಜಲಾಶಯದಲ್ಲಿ ಕಳೆದ ವರ್ಷ 19 ಟಿಎಂಸಿ ನೀರಿನ ಸಂಗ್ರಹಣೆ ಇದ್ದರೆ, ಪ್ರಸಕ್ತ ವರ್ಷ 21 ಟಿಎಂಸಿ ಅಂದರೆ ಹೆಚ್ಚುವರಿಯಾಗಿ 3 ಟಿಎಂಸಿಗಳಷ್ಟು ಹೆಚ್ಚುವರಿ ನೀರಿನ ಸಂಗ್ರಹಣೆ ಇದೆ ಎಂದು ವಿವರಿಸಿದರು.
ಜಲಧಾರೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಗಡುವು
ಜಲಧಾರೆ ಪ್ರಥಮ ಹಾಗೂ ದ್ವಿತೀಯ ಹಂತದ ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸೂಚನೆ ನೀಡಲಾಗಿದೆ. ಪ್ರಥಮ ಹಂತದ ಜಲಧಾರೆ ಯೋಜನೆಯನ್ನು 6 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಿ, ಜಲಧಾರೆ – 2 ನೇ ಹಂತದ ಯೋಜನೆಯನ್ನು ಮುಂದಿನ ವರ್ಷದ ಮಾರ್ಚ್ ಮಾಸಾಂತ್ಯದವರೆಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಗಡುವು ನೀಡಲಾಗಿದೆ ಎಂದರು.
ಭೀಮಾ ನದಿ ನೀರು ಆಧರಿಸಿ ಅನುಷ್ಠಾನಗೊಳಿಸುವ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳಿಗೆ ಅನೇಕ ಸವಾಲುಗಳು ಎದುರಾಗಿವೆ. ಸೊಲ್ಲಾಪೂರಕ್ಕೂ ನೀರಿನ ಪೂರೈಕೆಯ ವಿಷಯವಾಗಿ ಉದ್ಭವಿಸುವ ಸಮಸ್ಯೆಯಿಂದ ಈ ಯೋಜನೆಗಳಿಗೆ ಒಂದಿಷ್ಟು ತೊಡಕುಗಳು ಎದುರಾಗಿವೆ ಎಂದು ವಿಶ್ಲೇಷಿಸಿದರು.
ಆಗಸ್ಟ್ ನಲ್ಲಿ ನವರಸಪುರ ಉತ್ಸವ
ಬಿಸಿಲಿನ ತೀವ್ರತೆ ಹಾಗೂ ಪರೀಕ್ಷೆಗಳ ದಿನಾಂಕ ಹಿನ್ನೆಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ನವರಸಪುರ ಉತ್ಸವವನ್ನು ಆಯೋಜಿಸುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವ ಪಾಟೀಲ ಪ್ರಕಟಿಸಿದರು.
ನವರಸಪುರ ಉತ್ಸವಕ್ಕೆ ಶಾಸಕ ಯತ್ನಾಳರು ಆಕ್ಷೇಪ ವ್ಯಕ್ತಪಡಿಸುತ್ತಿದ್ದರಲ್ಲ ಎಂಬ ಪ್ರಶ್ನೆಗೂ ಉತ್ತರಿಸಿದ ಸಚಿವ ಡಾ.ಎಂ.ಬಿ. ಪಾಟೀಲ, ಅವರಿಗೆ ಇಷ್ಟವಿಲ್ಲ ಎಂದರೆ ಅವರು ಮನೆಯಲ್ಲಿ ಕುಳಿತುಕೊಳ್ಳಲಿ. ನಾವು ನವರಸಪುರ ಉತ್ಸವ ಹೆಸರಿನಲ್ಲಿಯೇ ಉತ್ಸವವನ್ನು ಆಚರಿಸುತ್ತೇವೆ. ಯಾವ ಹೆಸರು ಬದಲಾವಣೆ ಮಾಡುವುದಿಲ್ಲ. ಆಗಸ್ಟ್ ತಿಂಗಳಲ್ಲಿ ಈ ಉತ್ಸವ ಆಚರಿಸಲಾಗುವುದು ಎಂದು ವಿವರಿಸಿದರು.


