ಫೆ. 25ರಂದು ವಿಜಯಪುರದಲ್ಲಿ ಆಳ್ವಾಸ್ ನುಡಿಸಿರಿ ವೈಭವ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 19 :
ಶ್ರೀಮಂತ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಗುವ ಮೂಡಬಿದಿರೆಯ ಆಳ್ವಾಸ್ ನುಡಿಸಿರಿಯ ವೈಭವವನ್ನು ವಿಜಯಪುರ ಜಿಲ್ಲೆಯ ಜನತೆಗೂ ಉಣ ಬಡಿಸುವ ನಿಟ್ಟಿನಲ್ಲಿ ವಿಜಯಪುರದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಫೆ.25 ರಂದು ಸಂಜೆ 5-45 ಕ್ಕೆ ದರಬಾರ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ ಎಂದು ಆಳ್ವಾಸ್ ನುಡಿಸಿರಿ ವಿರಾಸತ್ ವಿಜಯಪುರ ಘಟಕದ ಅಧ್ಯಕ್ಷ ಡಾ. ಕೆ.ಬಿ. ನಾಗೂರ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಳ್ವಾಸ ನುಡಿಸಿರಿ ವಿಶ್ವದಲ್ಲಿಯೇ ಸಾಂಸ್ಕೃತಿಕ ಸಿರಿ ವೈಭವಕ್ಕೆ ಪ್ರಸಿದ್ಧಿ ಪಡೆದಿದೆ. ಹೀಗಾಗಿ ಈ ವೈಭವವನ್ನು ವಿಜಯಪುರ ಜನತೆಗೂ ಆಸ್ವಾದಿಸುವ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಈ ಪ್ರಯತ್ನವನ್ನು ಮಾಡಲಾಗುತ್ತಿದ್ದು, ಜಿಲ್ಲೆಯ ಎಲ್ಲ ಸ್ವಾಮೀಜಿಗಳ ಮಾರ್ಗದರ್ಶನ ಹಾಗೂ ಅನುಗ್ರಹದಿಂದ ಈ ವಿಶೇಷ ಕಾರ್ಯಕ್ರಮ ಸಂಘಟಿಸಲಾಗುತ್ತಿದ್ದು, ಆಳ್ವಾಸ್ ಎಜ್ಯುಕೇಷನಲ್ ಫೌಂಡೇಷನ್ ಅಧ್ಯಕ್ಷ ಡಾ.ಮೋಹನ್ ಆಳ್ವಾ ಅವರು ಅಧ್ಯಕ್ಷತೆ ವಹಿಸಲಿದ್ದು ಹಲವಾರು ಹರ-ಗುರು-ಚರ ಮೂರ್ತಿಗಳು ಪಾವನ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾಪನದ 500 ಕ್ಕೂ ಹೆಚ್ಚು ವಿದ್ಯಾರ್ಥಿ ಕಲಾವಿದರು ಯೋಗ ದೀಪಿಕಾ, ಶಾಸ್ತ್ರೀಯ ನೃತ್ಯ – ಅಷ್ಟಲಕ್ಷ್ಮಿ ಬಡಗುತಿಟ್ಟು ಯಕ್ಷಗಾನ ಶಂಕರಾರ್ಧ ಶರೀರಿನೀ, ಗುಜರಾತಿನ ದಾಂಡಿಯಾ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಸಾಹಸಮಯ ಮಲ್ಲಗಂಬ, ಸೃಜನಾತ್ಮಕ ನೃತ್ಯ, ಕಥಕ್, ಪುರಿಲಿಯಾ ಸಿಂಹ ನೃತ್ಯ, ತೆಂಕುತಿಟ್ಟು, ಶ್ರೀ ರಾಮ ಪಟ್ಟಾಭಿಷೇಕ, ಬೊಂಬೆ ವಿನೋದಾವಳಿ ಸೇರಿದಂತೆ ಹಲವಾರು ರಾಜ್ಯಗಳ ಸಾಂಸ್ಕೃತಿಕ ಕಲಾ ವೈಭವದ ಕಲೆಯನ್ನು ಕಲಾವಿದರು ವಿಜಯಪುರದ ಜನತೆಗೆ ಉಣಬಡಿಸಲಿದ್ದಾರೆ ಎಂದು ಡಾ.ನಾಗೂರ ವಿವರಿಸಿದರು.
ಈ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ಭರದಿಂಧ ಕೈಗೊಳ್ಳಲಾಗಿದ್ದು, 6 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಈ ಕಾರ್ಯಕ್ರಮಕ್ಕೆ ಪ್ರವೇಶ ಸಂಪೂರ್ಣ ಉಚಿತವಾಗಿದೆ, ಡಾ.ನಾಗೂರ ಗ್ರುಪ್ ಎಜ್ಯುಕೇಷನ್, ಚಾಣಕ್ಯ ಕೆರಿಯರ್ ಅಕಾಡೆಮಿ, ಲೋಣಿ ಗ್ರುಪ್ ಆಫ್ ಎಜ್ಯುಕೇಷನ್, ದರಬಾರ ಶಿಕ್ಷಣ ಸಂಸ್ಥೆಗಳ ಸಮೂಹ ಮೊದಲಾದ ಸಂಘ-ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಸಹಯೋಗ ನೀಡಿವೆ ಎಂದರು.
ಪಾಲಿಕೆ ಸದಸ್ಯ ರಾಜಶೇಖರ ಮಗಿಮಠ, ವಿಡಿಎ ಮಾಜಿ ಅಧ್ಯಕ್ಷ ಚಂದ್ರಕಾಂತ ಶೆಟ್ಟಿ, ಚಾಣಕ್ಯ ಕೆರಿಯರ್ ಅಕಾಡೆಮಿ ಸಂಸ್ಥಾಪಕ ಎನ್.ಎಂ. ಬಿರಾದಾರ, ಲೋಣಿ ಗ್ರುಪ್ ಎಜ್ಯುಕೇಷನ್ ಸೊಸೈಟಿ ಅಧ್ಯಕ್ಷ ಸುರೇಶ ಲೋಣಿ, ದರಬಾರ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ರಾಜೇಶ ದರಬಾರ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Share this