ಶ್ರೀ ಉತ್ತರಾದಿ ಮಠ ಹಾಗೂ ಶ್ರೀ ರಾಯರ ಮಠದ ಮಧ್ಯದ ವ್ಯಾಜ್ಯಕ್ಕೆ ಇತಿಶ್ರೀ-ಕರ್ನಾಟಕ ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃಧ್ಧಿ ಸಂಘ ಸ್ವಾಗತ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 6: ರಾಷ್ಟ್ರದ ಹಿತಕ್ಕಾಗಿ, ಸನಾತನ ಧರ್ಮದ ಮತ್ತು ಬ್ರಾಹ್ಮಣ ಸಮಾಜದ ಒಗ್ಗಟ್ಟು ಹಾಗೂ ಉನ್ನತಿಗಾಗಿ ಶ್ರೀ ಉತ್ತರಾದಿ ಮಠ ಹಾಗೂ ಶ್ರೀ ರಾಯರ ಮಠದ ಮಧ್ಯದಲ್ಲಿ ಸುಮಾರು ಐದು ದಶಕಗಳ ಅವಧಿಯ ಸುದೀರ್ಘ ಲೌಕಿಕ ವ್ಯಾಜ್ಯಕ್ಕೆ ಉಭಯ ಶ್ರೀಪಾದಂಗಳವರಾದ ಶ್ರೀ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಮತ್ತು ಶ್ರೀ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಭಾನುವಾರ ಇತಿಶ್ರೀ ಹಾಡಿದ ಪ್ರಸಂಗ ಅತ್ಯಂತ ಸಂತಸದಾಯಕ ಮತ್ತು ಸಂಭ್ರಮಿಸತಕ್ಕ ವಿಷಯವಾಗಿದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃಧ್ಧಿ ಸಂಘದ ರಾಜ್ಯಾಧ್ಯಕ್ಷ ಆನಂದ ಜೋಶಿ ಅವರು ತಿಳಿಸಿದ್ದಾರೆ. ಉಭಯ ಮಠಗಳ ಕಾನೂನಾತ್ಮಕ ವ್ಯಾಜ್ಯಗಳನ್ನು ಅನೇಕ ದಶಕಗಳಿಂದ ನೋಡಿದ ಭಕ್ತರಲ್ಲಿ ಧರ್ಮದ ಕುರಿತೇ ನಿರಾಶೆಯ ಮತ್ತು ಮನಸ್ತಾಪದ ಭಾವ ವ್ಯಕ್ತವಾಗುತ್ತಿದ್ದವು. ಆದರೆ ಈ ಭಾವನೆಗಳು ಚಿಗುರೊಡೆಯುವ ಹಂತದಲ್ಲೆ ಬೇರು ಸಮೇತ ಕಿತ್ತೊಗೆಯುವ ನಿರ್ಧಾರ ಮಾಡಿ ಕೋಟಿ ಕೋಟಿ ಭಕ್ತರಲ್ಲಿ ಮೂಡಿದ ಮನಸ್ತಾಪದ ಕತ್ತಲೆಗೆ ಎರಡೂ ಮಠದ ಉಭಯ ಶ್ರೀಪಾದಂಗಳವರು ಸಂಧಾನ ಮತ್ತು ಸಮಾಗಮದ ಮೂಲಕ ದೀಪ ಹಚ್ಚಿ ಕತ್ತಲೆಯನ್ನು ದೂರ ಮಾಡಿ ಸಮಾಜಕ್ಕೆ ಅಭಯ ನೀಡಿರುವದು ಅತ್ಯಂತ ಸ್ತುತ್ಯಾರ್ಹ ಕಾರ್ಯ. ಈ ಹಿನ್ನೆಲೆಯಲ್ಲಿ ಜೋಶಿ ಅವರು ಉಭಯ ಶ್ರೀಪಾದಂಗಳವರಿಗೆ ಪತಿಕಾ ಪ್ರಕಟಣೆ ಮೂಲಕ ಕೃತಜ್ಞತಾ ಪೂರ್ವಕ ಅನಂತ ಕೋಟಿ ಪ್ರಣಾಮಗಳನ್ನು ತಿಳಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
ಸಮಾಜಗಳ ಮೂಲ ಆಧಾರವೇ ಧರ್ಮ ಮತ್ತು ಧಾರ್ಮಿಕ ಶ್ರಧ್ಧಾ ಕೇಂದ್ರಗಳಾದ ಮಠಗಳು. ಆಂಥ ಮಠಗಳೇ ಪರಸ್ಪರ ಲೌಕಿಕವಾದ ವಿಷಯಗಳಲ್ಲಿ ವ್ಯಾಜ್ಯಗಳಾದರೆ ಭಕ್ತರಲ್ಲಿ ಅತ್ಯಂತ ಗೊಂದಲಮಯ ಸ್ಥಿತಿ ಉಂಟಾಗಿ ಸಮಾಜ ಕ್ಷೋಭೆ ಎದುರಿಸಬೇಕಾಗುತ್ತದೆ. ಮೊದಲೇ ಅತೀ ಅಲ್ಪಸಂಖ್ಯಾತ ಸಮಾಜ, ಅದರಲ್ಲಿಯೆ ಅತೀ ಕಡಿಮೆಯ ಜನಸಂಖ್ಯೆ ಮಾಧ್ವರದ್ದು. ಇಂಥ ಪ್ರಸಂಗದಲ್ಲಿ ಭಕ್ತರ ಮಧ್ಯೆ ಮಠ-ಮಠಕ್ಕಾಗಿ ಕಿತ್ತಾಟದ ಗೊಂದಲ, ವಿವಾದಗಳನ್ನು ನೋಡಿ ಬ್ರಾಹ್ಮಣರಲ್ಲಿ ಅನೇಕರು ಮತ್ತು ಬ್ರಾಹ್ಮಣೆತರರು ಕೂಡ ಹತಾಶೆ ಮನೋಭಾವನೆಯಲ್ಲಿರುವುದು ಗೋಚರಿಸುತ್ತಿತ್ತು. ಆದರೆ ಉಭಯ ಮಠಗಳ ಮಧ್ಯದಲ್ಲಿ ಆದಂತಹ ಈ ಒಂದು ಸಂಧಾನ ಮತ್ತು ಸಮಾಗಮಗಳ ಮೂಲಕ ಸಮಾಜ ಬಾಂಧವರಿಗೆ ಮತ್ತು ನಾಡಿಗೆ ಉತ್ತಮ ಸಂದೇಶ ನೀಡಿ ಉನ್ನತ ದಾರಿದೀಪವನ್ನು ತೋರಿದ್ದಾರೆ ಎಂದು ತಿಳಿಸಿ ಶ್ರೀ ಶ್ರೀ 1008 ಪೂಜ್ಯ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಗೆ ಮತ್ತು ಶ್ರೀ ಶ್ರೀ 1008 ಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಗೆ ವೈಯಕ್ತಿಕವಾಗಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಉಲ್ಲಾಸ ಪಾಟೀಲ, ರಾಜೇಂದ್ರ ಜೋಶಿ, ಪ್ರದೀಪ ಕುಲಕರ್ಣಿ, ಸಂಜೀವ ಕುಲಕರ್ಣಿ ಮುಂತಾದವರು ಬ್ರಾಹ್ಮಣ ಸಮಾಜದ ಪರವಾಗಿ ಕೃತಜ್ಞತೆ ಸಲ್ಲಿಸಿ ಅನಂತ ಪ್ರಣಾಮಗಳನ್ನು ತಿಳಿಸಿದ್ದಾರೆ.
ಈ ದಿಶೆಯಲ್ಲಿ ಪ್ರಯತ್ನ ಮಾಡಿದ ಶ್ರೀಕೂಡ್ಲಿ ಆರ್ಯ ಮಠದ ಶ್ರೀಪಾದಂಗಳವರಾದ ಶ್ರೀ ಶ್ರೀ 1008 ಪೂಜ್ಯ ಶ್ರೀ ರಘುವಿಜಯತೀರ್ಥರಿಗೆ ಅನಂತ ಪ್ರಣಾಮಗಳನ್ನು ತಿಳಿಸಿದ್ದಾರೆ.

Share this